ಬೆಳಗಾವಿ:
ರಾಜಕಾರಣದಲ್ಲಿ ಯಾರು ಯಾರಿಗೆ ಬೇಕಾದ್ರೂ ವೈರಿಗಳಾಗಬಹುದು ಮಿತ್ರರೂ ಆಗಬಹುದು ಎನ್ನುವುದಕ್ಕೆ ಸಧ್ಯ ಜಿಲ್ಲೆಯಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳು ಸಾಕ್ಷಿ ಎಂಬಂತಾಗಿವೆ. ಒಂದುಕಾಲದಲ್ಲಿ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬಗಳು ಜಿಗರಿಯಂತಿದ್ದವು ಎಂಬುದಕ್ಕೆ ಇಡೀ ಜಿಲ್ಲೆಯೇ ಸಾಕ್ಷಿಯಾಗಿತ್ತು. ಆದರೆ ಉಮೇಶ್ ಕತ್ತಿಯವರ ಸಾವಿನ ನಂತರ ಅದು ಬದಲಾಗುತ್ತಾ ಹೋಗ್ತಿದೆಯಾ ಎನ್ನುವ ಅನುಮಾನಗಳು ಜನರಲ್ಲಿ ಕಾಡುತ್ತಿವೆ. ಬಿಡಿಸಿಸಿ ಬ್ಯಾಂಕ್ ವಿಚಾರದಿಂದ ಹಿಡಿದು ಹೀರಾ ಶುಗರ್ಸ್ ವರೆಗೆ ಅಲ್ಲಿಂದ ಹಿಡಿದು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದವರೆಗೂ ಸಹ ಈಗ ಕತ್ತಿ ಕುಟುಂಬದ ಕೈ ಕೆಳಗಾಗಿರುವುದು ಎಲ್ಲರ ಗಮನದಲ್ಲೂ ಇದೆ. ಸಧ್ಯ ಉಮೇಶ ಕತ್ತಿಯವರ ನಂತರ ಅವರ ಮಗ ನಿಖಿಲ್ ಕತ್ತಿ ಕ್ಷೇತ್ರದ ಶಾಸಕರಾದರೂ ಸಹ ಅವರಿಗೆ ಮಾರ್ಗದರ್ಶಕರಾಗಿ ಅವರ ಚಿಕ್ಕಪ್ಪ ರಮೇಶ್ ಕತ್ತಿ ಕೆಲಸ ಮಾಡ್ತಿರೋದನ್ನ ಅಥವಾ ಅವರ ಬೆನ್ನಿಗೆ ಸದಾ ನಿಲ್ಲುತ್ತಿರುವುದನ್ನ ಯಾರೂ ಅಲ್ಲಗಳಿಯುವಂತಿಲ್ಲ. ಮೊನ್ನೆಯಷ್ಟೆ ಹುಕ್ಕೇರಿಯ ವಿಶ್ವರಾಜ್ ಭವನದಲ್ಲಿ ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿಯೇ ಚಿನ್ಹೆಯ ಅಡಿಯಲ್ಲಿಯೇ ರಮೇಶ ಕತ್ತಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಅದನ್ನ ಒಂದು ಲೆಕ್ಕದಲ್ಲಿ ಶಕ್ತಿ ಪ್ರದರ್ಶನ ಎನ್ನುವುದಕ್ಕಿಂತಲೂ ಸಹ ತಮ್ಮ ಕ್ಷೇತ್ರದ ಜನರನ್ನು ಜಾಗೃತಗೊಳಿಸುವ ಕಾರ್ಯಕ್ರಮವೆಂದೇ ಎಲ್ಲರೂ ಬಣ್ಣಿಸಿದ್ದರು. ಆ ಸಭೆಯಲ್ಲಿ ಮಾತನಾಡುತ್ತ ರಮೇಶ ಕತ್ತಿಯವರು ನಾವು ನಾಲ್ಕು ಜನ ಇದ್ದೇವೆ ಕ್ಷೇತ್ರದಲ್ಲಿ ಯಾರೂ ಸಹ ಕಾಲಿಡಲು ಅಂದರೆ ಕ್ಷೇತ್ರವನ್ನು ಆಳಲು ಬಿಡಲ್ಲ ಎಂದು ಶಪಥ ಮಾಡಿದಂತೆ ಮಾತನಾಡಿರುವುದನ್ನು ಇಡೀ ಜಿಲ್ಲೆಯ ಜನ ಗಮನಿಸಿದ್ದಾರೆ. ಅದು ಅವರ ಕ್ಷೇತ್ರದ ಮೇಲಿನ ಕಾಳಜಿ ಹಾಗೂ ಅವರ ಜನರ ಮೇಲಿನ ಕಾಳಜಿ ತೋರಿಸ್ತಿದೆಯಾದರೂ ಸಹ ಹುಕ್ಕೇರಿಯಲ್ಲಿ ಈಗಾಗಲೇ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕಾಲಿರಿಸಿದ್ದಾರೆ. ಹೀರಾ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಹುಕ್ಕೇರಿ ಸಹಕಾರಿ ವಿದ್ಯುತ್ ಸಹಕಾರಿ ಸಂಘವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಅಣ್ಣಾಸಾಹೇಬ್ ಜೊಲ್ಲೆ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲಿ ಪ್ರಶ್ನೆ ಮೂಡುತ್ತಿರುವುದು ಅನುಭವಿ ರಾಜಕಾರಣಿ ರಮೇಶ ಕತ್ತಿ ಅಲ್ಲಿಯವರೆಗೂ ಯಾಕೆ ಸುಮ್ಮನೆ ಕುಳಿತರು? ಯಾಕೆ ಅವರು ಯಾರನ್ನೂ ತಡೆಯುವ ಪ್ರಯತ್ನವಾಗಲಿ ಅಥವಾ ನಿರ್ದೇಶಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಲಿಲ್ಲ ಎನ್ನುವುದು. ಇದೊಂದು ಕಡೆಯಾದರೆ ನಿನ್ನೆ ಚಿಕ್ಕೋಡಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದ್ದು ಸಮಯ ಬಂದಾಗ ಕತ್ತಿಯವರಿಗೆ ಉತ್ತರ ನೀಡುತ್ತೆನೆ ಎಂದಿದ್ದಾರೆ. ಇನ್ನು ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ವಿರುದ್ಧ ಕನ್ಹೇರಿ ಮಠದಲ್ಲಿ ಲಿಂಗಾಯತ ಮುಖಂಡರು ಸಭೆ ಮಾಡಿದ ವಿಚಾರವೂ ನನ್ನ ಗಮನಕ್ಕಿದೆ 20 ವರ್ಷಗಳಿಂದ ನಮ್ಮ ವಿರುದ್ಧ ಸಭೆಗಳು ನಡೆಯುತ್ತಲೇ ಇವೆ. ಅವರ ಶಕ್ತಿ ಪ್ರದರ್ಶನ ಅವರು ಮಾಡಲಿ ನಮ್ಮ ಒಗ್ಗಟ್ಟು ನಾವು ಪ್ರದರ್ಶನ ಮಾಡುತ್ತೆವೆ ಎನ್ನುವ ಮೂಲಕ ಜಾರಕಿಹೊಳಿ ಸಹೋದರರೆಲ್ಲರೂ ಒಂದೇ ಎಂಬ ಸಂದೇಶವನ್ನು ಮತ್ತೆ ಸಾರಿದ್ದಾರೆ.ಅಲ್ಲದೇ ಹುಕ್ಕೇರಿಯಲ್ಲಿ ಸಮಾವೇಶ ಮಾಡುವ ಉದ್ದೇಶ ಇಲ್ಲ ಐದು ಲಕ್ಷ ಜನ ಜನ ಸೇರಿಸಿದ್ದೆವೆ ಅಲ್ಲಿ ಎರಡು ಸಾವಿರ ಜನ ಇದ್ದರು ಕತ್ತಿ ಕುಟುಂಬಕ್ಕೆ ಅರ್ಜಂಟ್ ಇದ್ದಷ್ಟು ನನಗೆ ಇಲ್ಲ ನಾನು ಆಯುರ್ವೇದಿಕ್ ವೈದ್ಯ ಇದ್ದಹಾಗೆ ನಮ್ಮದು ಸ್ಲೋ ಆಗಿ ಮೆಡಿಸಿನ್ ವರ್ಕ್ ಆಗುತ್ತೆ ಎನ್ನುವುದರ ಮೂಲಕ ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಹುಕ್ಕೇರಿಯ ಜನ ಹಾಗೂ ಜಿಲ್ಲೆಯ ಜನ ದೊಡ್ಡ ಸವ್ಕಾರ್ ಒಬ್ಬ ಇದ್ದಿದ್ರ ಹಿಂಗೆಲ್ಲ ಆಗ್ತಿರಲಿಲ್ಲ ಅಂತ ಮಾತನಾಡಿಕೊಳ್ತಿದ್ದಾರೆ.


