ಬೆಳಗಾವಿ

ತಂದೆ ಅಂತ್ಯ ಸಂಸ್ಕಾರಕ್ಕೂ ಬರಲಿಲ್ಲ ಮಕ್ಕಳು..!  

ನೀವು ಬೇಕಿದ್ದರೆ ಶವ ಸಂಸ್ಕಾರ ಮಾಡಿ, ಇಲ್ಲದಿದ್ದರೆ ಶವ ಬಿಸಾಡಿ ಎಂದ ಮಕ್ಕಳು..! 
ಚಿಕ್ಕೋಡಿ:  ನಾಗರಮುನ್ನೊಳ್ಳಿಯ ಶಿವನೇರಿ ಲಾಡ್ಜ್ ನಲ್ಲಿ ಪುಣೆ ಮೂಲದ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರು ಅನಾಥವಾಗಿ ಅಂತ್ಯ ಕಂಡ ದಾರುಣ ಘಟನೆ ಮಾನವ ಸಂಬಂಧಗಳನ್ನೇ ಸಂಶಯದಿಂದ ನೋಡುವಂತೆ ಮಾಡಿದೆ. ಪುಣೆ ಮೂಲದ ಮೂಲಚಂದ್‌ ಶರ್ಮಾ (72) ಬ್ಯಾಂಕ್‌ ಮ್ಯಾನೇಜರ್‌ ಹುದ್ದೆಯಲ್ಲಿದ್ದರು.
ಉತ್ತಮ ಸಂಬಳವಿತ್ತು. ಅವರ ಮಕ್ಕಳು ವಿದೇಶದಲ್ಲಿ ಉತ್ತಮ ನೌಕರಿಯಲ್ಲಿದ್ದಾರೆ. ಮಕ್ಕಳು, ಕಾರು, ಬಂಗಲೆ ಎಲ್ಲ ಇದ್ದರೂ ಮೂಲಚಂದ್‌ ತಮ್ಮ ಕೊನೆಯ ದಿನಗಳಲ್ಲಿ ಅನಾಥರಾಗಿ ಮೃತಪಟ್ಟಿದ್ದಾರೆ. ನಾಗರಮುನ್ನೊಳ್ಳಿ ಎಂಬ ಪುಟ್ಟ ಊರಿನಲ್ಲಿಅವರ ಅಂತ್ಯ ಸಂಸ್ಕಾರದ ವೇಳೆ ವಿದೇಶದಲ್ಲಿದ್ದ ಮಕ್ಕಳು ಸೇರಿದಂತೆ ಸಂಬಂಧಿಕರೂ ಬಂದಿಲ್ಲ.
ಆ ವೇಳೆ ಪೊಲೀಸರು ಅಮೆರಿಕದಲ್ಲಿರುವ ಮಗ ಮತ್ತು ಮಗಳನ್ನು ಸಂಪರ್ಕಿಸಿದ್ದಾರೆ. ಕೇಳಿದಾಗ ನಮ್ಮ ತಂದೆ ಮೊದಲು ಇದ್ದರು. ಈಗ ಇಲ್ಲ. ಅವರಿಗೆ ಚಿಕಿತ್ಸೆ ಕೊಡಿಸುವಂತೆ ನಾನು ನಿಮಗೆ ಹೇಳಿಲ್ಲ. ನೀವು ಬೇಕಿದ್ದರೆ ಶವ ಸಂಸ್ಕಾರ ಮಾಡಿ, ಇಲ್ಲದಿದ್ದರೆ ಶವ ಬಿಸಾಡಿ ಎಂದು ನಿಷ್ಠುರವಾಗಿ ನುಡಿದಿದ್ದಾರೆ. ಪೊಲೀಸರು ಮಾನವೀಯತೆ ಮೆರೆದು ಆ ವಕ್ತಿಯ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಮೂಲಚಂದ್‌ ಶರ್ಮಾ ಅವರನ್ನು ಒಂದೂವರೆ ತಿಂಗಳ ಹಿಂದೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ ಗ್ರಾಮದ ಶಿವನೇರಿ ಲಾಡ್ಜ್‌ಗೆ ವ್ಯಕ್ತಿಯೊಬ್ಬ ಕರೆದುಕೊಂಡು ಬಂದಿದ್ದ. ಬಳಿಕ ಆತ ಮೂಲಚಂದ್‌ ಅವರನ್ನು ಲಾಡ್ಜ್‌ನಲ್ಲಿ ಬಿಟ್ಟು ಪರಾರಿಯಾಗಿದ್ದ. ಲಾಡ್ಜ್‌ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮೂಲ ಚಂದ್‌ ವಿಚಾರಣೆ ನಡೆಸಿದ್ದರು. ಅವರು ಇಂಗ್ಲಿಷ್‌, ಹಿಂದಿ, ಮರಾಠಿ ಬಾಷೆ ಮಾತನಾಡುತ್ತಿದ್ದರು.
”ನನ್ನ ಮಗಳು ಕೆನಡಾದಲ್ಲಿ ಹಾಗೂ ಮಗ ದಕ್ಷಿಣ ಆಫ್ರಿಕಾದಲ್ಲಿ ಒಳ್ಳೆಯ ಕೆಲಸ ದಲ್ಲಿದ್ದಾರೆ. ನಾನು ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌,” ಎಂದು ಅವರು ಮಾಹಿತಿ ನೀಡಿದ್ದರು. ”ವ್ಯಕ್ತಿಯೊಬ್ಬ ಮೂಲಚಂದ್‌ ಅವರನ್ನು ನಾಗರಮುನ್ನೊಳಿಯ ಖಾಸಗಿ ಆಸ್ಪತ್ರೆಗೆ ಪಾಶ್ರ್ವವಾಯು ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದ. ನಮ್ಮ ಲಾಡ್ಜ್‌ನಲ್ಲಿ ರೂಂ ಮಾಡಿ ವಸತಿ ಇದ್ದರು. ಆ ವ್ಯಕ್ತಿ ಇವರ ಸಂಬಂಧಿ ಎಂದು ನಾವು ತಿಳಿದಿದ್ದೆವು. ಆದರೆ ಗುತ್ತಿಗೆ ಆಧಾರದ ಮೇಲೆ ಆರೈಕೆ ಮಾಡುವ ಕೆಲಸಗಾರ ಎಂಬ ಮಾಹಿತಿ ಬಳಿಕ ತಿಳಿಯಿತು. ಈ ಅವಧಿಯಲ್ಲಿ ಗುತ್ತಿಗೆ ಮುಗಿದ ಕಾರಣ ಆತ ಮೂಲಚಂದ್‌ ಅವರನ್ನು ಇಲ್ಲೇ ಬಿಟ್ಟು ಹೋಗಿದ್ದಾನೆ,” ಎಂದು ಲಾಡ್ಜ್‌ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದರು.
ಪೊಲೀಸರೇ ಅರೋಗ್ಯ ವಿಚಾರಿಸುತ್ತಿದ್ದರು
ಈ ವಿಷಯ ತಿಳಿದ ಚಿಕ್ಕೋಡಿ ಪಿಎಸ್‌ಐ ಬಸಗೌಡ ನೇರ್ಲಿ ಮೂಲಚಂದ್‌ ಅವರಿಗೆ ಸಮಾಧಾನ ಹೇಳಿದ್ದರು. ಬಳಿಕ ಅವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾಆಸ್ಪತ್ರೆಗೆ ಕಳಿಸಿದ್ದರು. ಕರ್ತವ್ಯ ನಿಮಿತ್ತ ವಾರಕ್ಕೆ 2 ಬಾರಿ ಬೆಳಗಾವಿಗೆ ಬರುವ ಚಿಕ್ಕೋಡಿ ಠಾಣೆ ಪೊಲೀಸ್‌ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುತ್ತಿದ್ದರು.
ಆದರೆ, ಚಿಕಿತ್ಸೆ ಫಲಿಸದ ಕಾರಣ ಶನಿವಾರ ಮೂಲಚಂದ್‌ ಜಿಲ್ಲಾಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ನಾಗರಮುನ್ನೊಳಿ ಗ್ರಾಮಕ್ಕೆ ತಂದ ಪೊಲೀಸರು, ನಾಗರಮುನ್ನೊಳಿ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರು ಸಹಾಯದಿಂದ ಅಂತಿಮ ಸಂಸ್ಕಾರ ನೆರವೇರಿಸಿದರು.
TV24 News Desk
the authorTV24 News Desk

Leave a Reply

error: Content is protected !!