

ಬೆಳಗಾವಿ:
ಪ್ರೀತಿಯ ಹೆಸರಿನಲ್ಲಿ ಮೂರು-ನಾಲ್ಕು ವರ್ಷಗಳ ಕಾಲ ನಂಬಿಸಿ, ಕೊನೆಗೆ ಮದುವೆಯಾಗುವಂತೆ ಕೇಳಿದ್ದಕ್ಕೆ ಪ್ರೇಯಸಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ
ಬೆಳಗಾವಿ ಜಿಲ್ಲೆಯ ಗೋಕಾಕದ ಪ್ರಸಿದ್ಧ ಗೋಕಾಕ ಫಾಲ್ಸ್ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿರುವುದಾಗಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೊಲೆ ಪ್ರಕದಣದಲ್ಲಿ ಬಂಧಿಯಾಗಿರುವ ಆರೋಪಿಯನ್ನು ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ಬಸಪ್ಪ ಸಿದ್ದಪ್ಪ ಸಾತನ್ನವರ್ ಎಂದು ಗುರುತಿಸಲಾಗಿದ್ದು ಕೊಲೆಯಾದ ದುರ್ದೈವಿಯನ್ನು ರಾಯಭಾಗ ತಾಲೂಕಿನ ಹಾರೂಗೇರಿ ಗ್ರಾಮದ ರಕ್ಷಿರಾ ರಾಜು ಸರಿಕರ(25) ಎಂದು ಗುರುತಿಸಲಾಗಿದೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಬಸಪ್ಪ ಹಾಗೂ ರಕ್ಷಿತಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪ್ರೀತಿ ಮಾಡುವಾಗ ಸಿದ್ದಪ್ಪ ರಕ್ಷಿತಾಳನ್ನೆ ಮದುವೆಯಾಗುತ್ತೇನೆ ಎಂದು ನಂಬಿಸುತ್ತಾ ಬಂದಿದ್ದ ಎನ್ನಲಾಗಿದೆ. ಆದರೆ ಮದುವೆಯ ವಿಚಾರ ಬಂದಾಗಲೆಲ್ಲಾ ಮುಂದೂಡುತ್ತಾ ಬಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ವಿಚಾರವಾಗಿ ಅಕ್ಟೋಬರ್ 28ರಂದು ಆರೋಪಿತನು ಹಾರೂಗೇರಿಯಿಂದ ಯುವತಿಯನ್ನು ಗೋಕಾಕ ಫಾಲ್ಸ್‌ಗೆ ಕರೆದುಕೊಂಡು ಬಂದಿದ್ದಾನೆ. ಸಂಜೆ ಸುಮಾರು ನಾಲ್ಕು ಗಂಟೆಯ ವೇಳೆಗೆ ಫಾಲ್ಸ್ ರಸ್ತೆಯ ಬದಿಯ ಕಟ್ಟೆಯ ಮೇಲೆ ಇಬ್ಬರೂ ಕುಳಿತು ಮಾತನಾಡುತ್ತಿದ್ದಾಗ, ಕಳೆದ ಮೂರು-ನಾಲ್ಕು ವರ್ಷಗಳಿಂದ ಮದುವೆಯಾಗುವುದಾಗಿ ಹೇಳಿ ಯಾಕೆ ಮದುವೆಯನ್ನು ಮುಂದೂಡುತ್ತಿದ್ದೀಯಾ ಎಂದು ಯುವತಿ ಪ್ರಶ್ನಿಸಿದ್ದಾಳೆ.
ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿತನು ಯುವತಿಯ ಕಿವಿಯ ಹತ್ತಿರ ಹಾಗೂ ಕೆನ್ನೆಗೆ ಕೈಯಿಂದ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಕೈಯಿಂದ ಕುತ್ತಿಗೆ ಹಿಸುಕಿ, ಬಳಿಕ ವೇಲ್‌ನಿಂದ ಕುತ್ತಿಗೆ ಬಿಗಿದು ಎಳೆದು ಯುವತಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಗೋಕಾಕ ಫಾಲ್ಸ್ ಗುಡ್ಡದ ಇಳಿಜಾರು ಪ್ರದೇಶದಲ್ಲಿರುವ ಕಂಟೆಗಳ ಮಧ್ಯೆ ಮೃತದೇಹವನ್ನು ಎಸೆದು ಹೋಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರೀತಿಯ ಹೆಸರಿನಲ್ಲಿ ನಂಬಿಕೆ ಗಳಿಸಿ, ಮದುವೆಯ ಭರವಸೆ ನೀಡಿ, ಕೊನೆಗೆ ಯುವತಿಯ ಜೀವವನ್ನೇ ಬಲಿ ಪಡೆದ ಈ ಘಟನೆ ಸ್ಥಳೀಯವಾಗಿ ಆತಂಕ ಮೂಡಿಸಿದೆ.
ಪ್ರೀತಿ, ನಂಬಿಕೆ ಮತ್ತು ಮದುವೆಯ ಭರವಸೆಯ ಹಿಂದೆ ನಡೆದಿದೆಯೇ ಈ ಭೀಕರ ಕೊಲೆ? ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.









