ಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ರೈತರ ಹೋರಾಟದ ನಡುವೆಯೇ ಸಕ್ಕರೆ ಕಳ್ಳಸಾಗಣೆ ಆರೋಪ: ಲಾರಿಯನ್ನು ತಡೆದ ರೈತರು!

ಬೆಳಗಾವಿ ಬ್ರೇಕಿಂಗ್…

ಭೂತರಾಮನಹಟ್ಟಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ – ಸಕ್ಕರೆ ಮಾರಾಟ ಮಾಡದಂತೆ ಕಾರ್ಖಾನೆಗಳಿಗೆ ಬೀಗ ಹಾಕಿದ್ದರೂ ಕಳ್ಳಮಾರ್ಗದಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ರೈತರ ಆಕ್ರೋಶ

ಬೆಳಗಾವಿ: ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಹಗ್ಗಜಗ್ಗಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಇದೀಗ ಸಕ್ಕರೆ ಕಳ್ಳಸಾಗಣೆ ಆರೋಪ ಕೇಳಿಬಂದಿದೆ. ರೈತರ ವಿರೋಧದ ನಡುವೆಯೂ ಲಾರಿಯಲ್ಲಿ ಸಕ್ಕರೆ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತರು ಲಾರಿಯನ್ನು ತಡೆದು ವಶಕ್ಕೆ ಪಡೆದ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಬಳಿ ನಡೆದಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಕ್ಕರೆ ತುಂಬಿದ ಲಾರಿಯನ್ನು ಗಮನಿಸಿದ ರೈತರು, ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲವಾಗಿ ಸಕ್ಕರೆ ಮಾರಾಟ ಮಾಡದಂತೆ ಕಾರ್ಖಾನೆಗಳ ಗೋದಾಮುಗಳಿಗೆ ಬೀಗ ಹಾಕಿರುವ ಸಂದರ್ಭದಲ್ಲಿ, ರೈತರ ಮನವಿಯನ್ನು ಧಿಕ್ಕರಿಸಿ ಸಕ್ಕರೆಯನ್ನು ಸಾಗಾಟ ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬ್ಬಿಗೆ ಸೂಕ್ತ ಬೆಲೆ ನಿಗದಿಯಾಗುವವರೆಗೂ ಸಕ್ಕರೆ ಮಾರಾಟ ಮಾಡಬಾರದು ಎಂಬುದು ರೈತರ ಪ್ರಮುಖ ಆಗ್ರಹವಾಗಿದೆ. ಈ ಸಂಬಂಧ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರಿಗೂ ರೈತ ಮುಖಂಡರು ಮನವಿ ಮಾಡಿದ್ದರು. ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಸಕ್ಕರೆ ಮಾರಾಟ ಹಾಗೂ ಸಾಗಾಟಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು.

ಆದರೆ ರೈತರ ಈ ಮನವಿಯನ್ನು ಲೆಕ್ಕಿಸದೆ ಕೆಲವು ಕಾರ್ಖಾನೆಗಳಿಂದ ಕಳ್ಳಮಾರ್ಗದಲ್ಲಿ ಸಕ್ಕರೆ ಮಾರಾಟ ಹಾಗೂ ಸಾಗಾಟ ನಡೆಯುತ್ತಿದೆ ಎಂಬ ಆರೋಪವನ್ನು ರೈತರು ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಹೆದ್ದಾರಿಯಲ್ಲಿ ಲಾರಿಯನ್ನು ತಡೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕಬ್ಬಿನ ದರ ನಿಗದಿ ವಿಚಾರವಾಗಿ ಈಗಾಗಲೇ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಒಂದೆಡೆ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಸಭೆಗಳ ಮೇಲೆ ಸಭೆಗಳು ನಡೆಯುತ್ತಿದ್ದರೂ ದರದ ವಿಚಾರದಲ್ಲಿ ಒಮ್ಮತ ಮೂಡಿಲ್ಲ. ಮತ್ತೊಂದೆಡೆ ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಸಕ್ಕರೆ ಮಾರಾಟ ಮಾಡದಂತೆ ಕಾರ್ಖಾನೆಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದೀಗ ಸಕ್ಕರೆ ಸಾಗಾಟದ ವಿಚಾರವೂ ಹೋರಾಟಕ್ಕೆ ಹೊಸ ತಿರುವು ನೀಡಿದೆ. ಭೂತರಾಮನಹಟ್ಟಿ ಬಳಿ ಲಾರಿ ತಡೆದಿರುವ ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರೈತರ ಪ್ರತಿಭಟನೆ ಮತ್ತು ಸಕ್ಕರೆ ಸಾಗಾಟದ ಆರೋಪದಿಂದಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಒಟ್ಟಿನಲ್ಲಿ ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ರೈತರ ಆಕ್ರೋಶ ಇನ್ನಷ್ಟು ಹೆಚ್ಚಾಗುತ್ತಿದ್ದು, ಇದೀಗ ಸಕ್ಕರೆ ಸಾಗಾಟದ ವಿಚಾರವೂ ವಿವಾದಕ್ಕೆ ಕಾರಣವಾಗಿದೆ. ರೈತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

TV24 News Desk
the authorTV24 News Desk

Leave a Reply

error: Content is protected !!