



ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಜು.26) ಗಡಿಭಾಗದ ಕನ್ನಡಪರ ಸಂಘಟನೆಗಳ ಮುಖಂಡರ ಜತೆಗೆ ಗಡಿ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ಪ್ರಮುಖಾಂಶಗಳು
- ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷರಾದ ಮಹದೇವ ತಳವಾರ, ಗಡಿ ಸಂರಕ್ಷಣಾ ಆಯೋಗ ರಚನೆ ಆಗಬೇಕು; ಗಡಿ ಪ್ರದೇಶಾಭಿವೃದ್ಧಿ ಮಂಡಳಿಗಳ ಕಚೇರಿಯನ್ನು ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಗಡಿ ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ ಸ್ಥಳೀಯರನ್ನು ನೇಮಿಸಬೇಕು. ಮಹಾರಾಷ್ಟ್ರದ ಕೊಲ್ಲಾಪುರ,ಪುಣೆ, ಸೊಲ್ಲಾಪು ಮತ್ತಿತರ ಕಡೆಗಳಲ್ಲಿ ಕನ್ನಡಿಗರು ಭಾಷಾ ಅಲ್ಪಸಂಖ್ಯಾತರಾಗಿದ್ದು, ಅಲ್ಲಿ ಕನ್ನಡದಲ್ಲಿ ದಾಖಲಾತಿಗಳನ್ನು ಒದಗಿಸಿದರೆ ಮಾತ್ರ ಬೆಳಗಾವಿಯಲ್ಲಿ ಮರಾಠಿ ದಾಖಲೆ ನೀಡುವ ಬಗ್ಗೆ ಪರಿಶೀಲಿಸಬೇಕು ಎಂದು ತಳವಾರ ಆಗ್ರಹಿಸಿದರು.
ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ ಪರಿಣಿತ ಶಿಕ್ಷಕರನ್ನು ನೇಮಿಸಬೇಕು; ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು; ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಲು ಫುಲೆ ಆರೋಗ್ಯ ಯೋಜನೆಯನ್ನು ಮಹಾರಾಷ್ಟ್ರ ಸರಕಾರ ಜಾರಿಗೊಳಿಸುತ್ತಿದ್ದು ಇದಕ್ಕೆ ತಡೆಯೊಡ್ಡಬೇಕು ಎಂದು ಮನವಿ ಸಲ್ಲಿಸಿದರು. - ಕರವೇ ಪ್ರವೀಣ ಶೆಟ್ಟಿ ಬಣದ ಮುಖಂಡ ಅಭಿಲಾಷ್, ನಾಡವಿರೋಧಿ ಚಟುವಟಿಕೆ ನಡೆಸುವ ಎಂ.ಇ.ಎಸ್. ಸಂಘಟನೆಯನ್ನು ನಿಷೇಧಿಸಲು ಯಾಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಪ್ರಶ್ನಿಸಿದರು.
- ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ತಾಳೂರಕರ, ಸಾರ್ವಜನಿಕರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು; ಸುವರ್ಣ ವಿಧಾನಸೌಧದ ಆವರಣದಲ್ಲಿ ಭವ್ಯವಾದ ಭುವನೇಶ್ವರಿ ತಾಯಿಯ 108 ಅಡಿ ಎತ್ತರದ ಕಂಚಿನ ಮೂರ್ತಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
- ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ದೀಪಕ್ ಗುಡಗನಟ್ಟಿ, ಪ್ರತಿ ಮೂರು ತಿಂಗಳಿಗೊಮ್ಮೆ ಕನ್ನಡಪರ ಸಂಘಟನೆಗಳ ಸಭೆ ನಡೆಸಬೇಕು; ಬೆಳಗಾವಿಯಲ್ಲಿ ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಆಚರಣೆಗೆ ದಸರಾ ಮಾದರಿಯಲ್ಲಿ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಎಂ.ಇ.ಎಸ್. ಹಾಗೂ ಶಿವಸೇನೆ ಸಂಘಟನೆಗಳು ಕನ್ನಡಿಗರನ್ನು, ಅಧಿಕಾರಿಗಳು ಮತ್ತು ಕನ್ನಡಪರ ಹೋರಾಟಗಾರರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದು, ಅಂತವರ ವಿರುದ್ಧ ಗೂಂಡಾ ಕಾಯ್ದೆ ಪ್ರಕಾರ ಬಗ್ಗೆ ಕ್ರಮ ವಹಿಸಬೇಕು ಎಂದು ಗುಡಗನಟ್ಟಿ ಒತ್ತಾಯಿಸಿದರು.
ಗೋವಾದಲ್ಲಿ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಬೇಕು; ಶಾಲಾ ಮಕ್ಕಳಿಗೆ ಜಾತಿ/ಆದಾಯ ಪ್ರಮಾಣಪತ್ರಗಳು ದೊರಕುತ್ತಿಲ್ಲ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಕನ್ನಡ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಸೇರಿದಂತೆ ಸರಕಾರಿ ಸಂಸ್ಥೆಗಳಲ್ಲಿ ಕನ್ನಡಿಗ ನೌಕರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು ಎಂದು ಆಗ್ರಹಿಸಿದರು.
- ಕನ್ನಡಪರ ಹೋರಾಟಗಾರ ಮೆಹಬೂಬ್ ಮಕಾನದಾರ, “ಎಂ.ಇ.ಎಸ್. ಸಂಘಟನೆಯವರು ಪದೇಪದೆ ಮಹಾರಾಷ್ಟ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಿ ಕರ್ನಾಟಕದಲ್ಲಿ ತಮ್ಮ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳ ಎದರು ಅಲವತ್ತುಕೊಂಡು ದೇಶದಾದ್ಯಂತ ಅಪಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕ ಸರಕಾರವು ಮರಾಠಿ ಭಾಷಿಕರಿಗೆ ನೀಡಿರುವ ಸೌಲಭ್ಯಗಳು, ಶಾಲೆಗಳು ಮತ್ತಿತರ ಸೌಕರ್ಯಗಳ ದಾಖಲೆಯನ್ನು ಕನ್ನಡ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಯಲ್ಲಿ ಮುದ್ರಿಸಿ ವಾಸ್ತವ ಸಂಗತಿಯನ್ನು ದೇಶದ ಮುಂದಿಡಬೇಕು ಎಂದು ಸಲಹೆ ನೀಡಿದರು.
ಗಡಿಭಾಗದ ಜನರಿಗೆ ಉತ್ತಮ ಉದ್ಯೋಗಾವಕಾಶ ಒದಗಿಸಲು ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವಕ್ಕೆ ಪ್ರತಿವರ್ಷ ಎರಡು ಕೋಟಿ ರೂಪಾಯಿ ವಿಶೇಷ ಅನುದಾನ ನೀಡಬೇಕು ಎಂದು ಮೆಹಬೂಬ್ ಮಕಾನದಾರ ಆಗ್ರಹಿಸಿದರು. - ಕನ್ನಡ ಸಂಘಟನೆಗಳ ಹೋರಾಟದ ಫಲವಾಗಿ ಗಡಿ ಉಸ್ತುವಾರಿ ಸಚಿವರನ್ನು ಸರಕಾರ ನೇಮಿಸಿದೆ.
ನಾಡು-ನುಡಿಯ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳಿಗೆ ಸೂಕ್ತ ಸ್ಪಂದನೆ ದೊರಕುತ್ತಿರಲಿಲ್ಲ.
ಗಡಿ ವಿವಾದ ಮತ್ತು ಸಮಸ್ಯೆಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಎಚ್.ಕೆ.ಪಾಟೀಲ ಅವರಿಗೆ ಗಡಿ, ನಾಡು-ನುಡಿಯ ಬಗ್ಗೆ ಎಲ್ಲವೂ ಗೊತ್ತಿದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡ ಅಶೋಕ ಚಂದರಗಿ ವಿವರಿಸಿದರು.
ಆದಾಗ್ಯೂ ಗಡಿ ಭಾಗದ ಕನ್ನಡಿಗರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಅವಕಾಶ ಕಲ್ಪಿಸುವುದಕ್ಕಾಗಿ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಮರಾಠಿ ದಿನಪತ್ರಿಕೆಗಳಲ್ಲಿ ” ಬೆಳಗಾಂವ” ಪದ ಬಳಕೆಗೆ ಆಕ್ಷೇಪ
- ಬೆಳಗಾಂವ ಅನ್ನು “ಬೆಳಗಾವಿ” ಎಂದು ಸರಕಾರ ಮರುನಾಮಕರಣ ಮಾಡಿದೆ. ಆದಾಗ್ಯೂ ಬೆಳಗಾವಿ ಜಿಲ್ಲೆಯಲ್ಲಿ ಪ್ರಕಟವಾಗುತ್ತಿರುವ ಕೆಲವು ಮರಾಠಿ ಭಾಷೆಯ ದಿನಪತ್ರಿಕೆಗಳಲ್ಲಿ ಇದುವರೆಗೆ “ಬೆಳಗಾಂವ” ಎಂದೇ ಬರೆಯಲಾಗುತ್ತಿದೆ.
ಕರ್ನಾಟಕ ಸರಕಾರದಿಂದ ಜಾಹೀರಾತು ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಿರುವ ದಿನಪತ್ರಿಕೆಗಳು “ಬೆಳಗಾವಿ” ಎಂದು ಬರೆಯುತ್ತಿಲ್ಲ ಎಂದು ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷರಾದ ಮಹಾದೇವ ತಳವಾರ ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರೀಯ ವಿದ್ಯಾಲಯ, ವಿಮಾನ ನಿಲ್ದಾಣ ಹಾಗೂ ಮರಾಠಿ ಲಘು ಪದಾತಿ ದಳದ ಕೇಂದ್ರ ಸೇರಿದಂತೆ ಕೇಂದ್ರ ಸರಕಾರದ ಎಲ್ಲ ಸಂಸ್ಥೆಗಳು “ಬೆಳಗಾವಿ” ಎಂದೇ ಬಳಸುತ್ತಿವೆ. ಆದರೆ ಮರಾಠಿ ದಿನಪತ್ರಿಕೆಗಳು ಮಾತ್ರ “ಬೆಳಗಾಂವ” ಎಂದೇ ಬಳಸುತ್ತಿದ್ದು, ಈ ಪತ್ರಿಕೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಳವಾರ ಅವರು ಆಗ್ರಹಿಸಿದರು.