ಬೆಳಗಾವಿ: ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಗೆ ಬಂದ ಪತ್ನಿಯ ಮೇಲೆ ಕೋರ್ಟ್ ಆವರಣದಲ್ಲಿಯೇ ಪತಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಕೋರ್ಟ್ ಆವರಣದಲ್ಲಿ ನಡೆದಿದೆ.ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ಐಶ್ವರ್ಯ ಗಣಾಚಾರಿ ಮೇಲೆ ಆಕೆಯ ಪತಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಬೈಲಹೊಂಗಲ ತಾಲೂಕಿನ ಸವಟಗಿ ಗ್ರಾಮದ ಮುತ್ತಪ್ಪ ಗಣಾಚಾರಿ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದ್ದು ತೀವ್ರ ಹಲ್ಲೆಗೊಳಗಾದ ಐಶ್ವರ್ಯ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ. ತೀವ್ರ ಹಲ್ಲೆಗೊಳಗಾದ ಐಶ್ವರ್ಯಾಳನ್ನು ಅವರ ಕುಟುಂಬಸ್ಥರು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಹಲ್ಲೆ ಮಾಡುತ್ತಿದ್ದಂತೆ ಮುತ್ತಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಸಮ್ಮತಿಯ ಮೇರೆಗೆ ವಿವಾಹ ವಿಚ್ಛೇದನಕ್ಕೆ ಜೋಡಿ ಮುಂದಾಗಿತ್ತು ಎನ್ನಲಾಗಿದ್ದು ಇಂದು ಕೋರ್ಟ್ ಗೆ ಪತ್ನಿ ಐಶ್ವರ್ಯ ಬರುತ್ತಿದ್ದಂತೆ ಮುತ್ತಪ್ಪ ಹಲ್ಲೆ ಮಾಡಿದ್ದಾನೆ. ಘಟನೆಯೂ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
