ಬೆಳಗಾವಿ:
ಶಾಲಾ ಸಾಕ್ಷರತಾ ಪ್ರಮಾಣ ಅಥವಾ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರ ಸದಾ ಒಂದಿಲ್ಲೊಂದು ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಲೇ ಇದೆ. ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಪುಸ್ತಕ, ವಿದ್ಯಾರ್ಥಿ ವೇತನ,ಬೈಸಿಕಲ್ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ.ಇದರ ಮಧ್ಯೆ ಸರ್ಕಾರ ಕೊಡುತ್ತಿರುವ ಈ ಯೋಜನೆಗಳಿಗೂ ಹೊರತಾಗಿ ಇಲ್ಲೊಂದು ಶಾಲೆಯ ಶಿಕ್ಷಕರು ತಮ್ಮ ಜೇಬಿನಿಂದ ವಿದ್ಯಾರ್ಥಿಗಳ ಹೆಸರಲ್ಲಿ 1111 ರೂ ಠೇವಣಿ ಇಡಲು ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಇಂತದೊಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಿದ್ದು ಮಕ್ಕಳ ದಾಖಲಾತಿ ಹೆಚ್ಚಿಸಲು ಈ ವಿಭಿನ್ನ ಪ್ರಯತ್ನಕ್ಕೆ ಶಿಕ್ಷಕರು ಮುಂದಾಗಿದ್ದಾರೆ. ಶಾಲೆಯ ಪ್ರಧಾನ ಗುರುಗಳಾದ ಎ ಬಿ ಪಾಟೀಲ್, ಹಾಗೂ ಶಿಕ್ಷಕರಾದ ಸಂಗಮೇಶ ಹತ್ತರಕಿಹಾಳ ಅವರು 2025- 26 ನೇ ಸಾಲಿನಲ್ಲಿ ದಾಖಲಾದ 1 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಶ್ಚಿತ ಠೇವಣಿ 1111 ರೂ ಬಾಂಡ್ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ರ್ಯಾಕ್ ಸೂಟ್ ವಿತರಣೆ ಮಾಡಿದ್ದಾರೆ. ಗಡಿ ಭಾಗದ ಕನ್ನಡ ಶಾಲೆಗಳು ಮುಚ್ಚುತ್ತಿರುವ ಮತ್ತು ಕನ್ನಡ ಶಾಲೆಗಳತ್ತ ಪೋಷಕರು ಹಾಗೂ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಈ ವಿಶೇಷ ಪ್ರಯತ್ನಕ್ಕೆ ಶಾಲಾ ಶಿಕ್ಷಕರು ಕೈ ಹಾಕಿದ್ದು ಗ್ರಾಮಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಈ ಕಾರ್ಯವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಕೊಟ್ಟಲಗಿಯ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಕ್ಕೆ ಕ್ಷೇತ್ರ ಸಮನ್ವಾಯಾಧಿಕಾರಿ ಜಿ ಎ ಖೋತ್, ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಿ ಎಂ ಹಿರೇಮಠ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊಟ್ಟಲಗಿ ಗ್ರಾಮಸ್ಥರು ಗ್ರಾಮ ಪಂ ಸದಸ್ಯರು ಎಸ್ ಡಿ ಎಮ್ ಸಿ ಸದಸ್ಯರು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.



