





ಬೆಳಗಾವಿ:
ಬಿಜೆಪಿ ಬಗ್ಗೆ ಶಾಸಕ ಬಾಬಾಸಾಹೇಬ್ ಪಾಟೀಲ್ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕುರಗುಂದ ಗ್ರಾಮದಿಂದ ಆರಂಭವಾದ ಬಿಜೆಪಿ ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ನೇಗಿನಾಳ ಗ್ರಾಮದ ಬಾಬಾಸಾಹೇಬ್ ಪಾಟೀಲ್ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಮುಂದಾದರು. ಬಾಬಾಸಾಹೇಬ್ ಪಾಟೀಲ್ ವಿರುದ್ದ ದಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಹೋರಾಟಗಾರರನ್ನು ಗ್ರಾಮದ ಹೊರಗೆ ತಡೆಯಲು ಪೊಲೀಸರು ಸಕಲ ಸಿದ್ದತೆ ನಡೆಸಿಕೊಂಡರು. ನೇಗಿನಾಳ ಗ್ರಾಮದ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ಬಂದೋಬಸ್ತ ಮಾಡಿದರು. ಇನ್ನು ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಜಟಾಪಟಿ ನಡೆಯಿತು. ಬಿಜೆಪಿ ಮಾಜಿ ಶಾಸಕರಾದ ಸಂಜಯ್ ಪಾಟೀಲ್ ಹಾಗೂ ಮಹಾಂತೇಶ ದೊಡ್ಡಗೌಡರ್ ರನ್ನು ಪೊಲೀಸರು ವಶಕ್ಕೆ ಪಡೆದರು.ಮಾಜಿ ಶಾಸಕರನ್ನು ವಶಕ್ಕೆ ಪಡೆಯುತ್ತಿದ್ದಂತೆ ಕಾರ್ಯಕರ್ಯರು ಬ್ಯಾರಿಕೇಡ್ ಹಾರಿ ಗ್ರಾಮದೊಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಸಂಜಯ್ ಪಾಟೀಲ್ಣ ಮಹಾಂತೇಶ ದೊಡ್ಡಗೌಡರ್, ವಿಕ್ರಂ ಇನಾಮ್ದಾರ್, ಲಕ್ಷ್ಮೀ ಇನಾಮ್ದಾರ್, ಸೇರಿ ಹಲವರು ಸಾಥ್ ನೀಡಿದರು.