ಬೆಳಗಾವಿ:
ಖ್ಯಾತ ಯೋಗಗುರು ಹರಿಹರ ಪೀಠದ ವಚನಾನಂದ ಶ್ರೀಗಳ ಸಹೋದರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೈಕ್ ಗೆ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿದ್ದರಿಂದ ದುರ್ಘಡನೆ ನಡೆದಿದ್ದು ವಚನಾನಂದರ ಸಹೋದರ ಅಶೋಕ ಗೌರಗೊಂಡ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಡರಾತ್ರಿ ಅಶೋಕ್ ಅವರು ತಾಂವಶಿ ಗ್ರಾಮದಿಂದ ಅಥಣಿಗೆ ಪ್ರಯಾಣ ಬೆಳೆಸುವಾಗ ದುರ್ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಭರಮಕೋಡಿ ಗ್ರಾಮದ ಬಳಿ ಬೈಕ್ ಅಪಘಾತವಾಗಿದೆ. ತಲೆಗೆ ಗಂಭೀರ ಗಾಯವಾಗಿದ್ದರಿಂದ ಅಶೋಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು ಸಧ್ಯ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾಣಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮರಣೋತ್ತರ ಪರೀಕ್ಷೆಯ ನಂತರ ವಚನಾನಂದ ಶ್ರೀಗಳ ಸ್ವಗ್ರಾಮ ತಾಂವಶಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
