ಬೆಳಗಾವಿ : 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಭೂತಪೂರ್ವ ಜಯ ಸಾಧಿಸಿದರು. ಒಟ್ಟು 1,02,040 ಮತಗಳನ್ನು ಪಡೆದ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು 51,680 ಮತಗಳ ಅಂತರದಿಂದ ಸೋಲಿಸುವ ಮೂಲಕ ಆ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತಗಳ ಅಂತರದ ಜಯ ಸಾಧಿಸಿದ ಕೀರ್ತಿಗೆ ಪಾತ್ರರಾದರು.
1975 ರಲ್ಲಿ ಬೆಳಗಾವಿ ಜಿಲ್ಲೆಯ ಹಟ್ಟಿಹೊಳಿಯಲ್ಲಿ ಜನಿಸಿದ ಲಕ್ಷ್ಮೀ ಹೆಬ್ಬಾಳಕರ್ ಮೈಸೂರು ವಿಶ್ವ ವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದಿದ್ದಾರೆ.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ಸಮರ್ಥ ಸೇವೆ ಸಲ್ಲಿಸಿರುವ ಅವರು 2013 ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಬಳಿಕ 2014 ರ ಲೋಕಸಭಾ ಚುನಾವಣೆಯಲ್ಲೂ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಯ ಹೊಂದಿದ್ದರು. ಸೋಲುಗಳಿಂದ ಧೃತಿಗೆಡದ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಮುಂದುವರೆಸಿದರು. ಶಾಸಕಿಯಲ್ಲದಿದ್ದರೂ ಓರ್ವ ಶಾಸಕರು ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ಕ್ಷೇತ್ರಕ್ಕೆ ತಂದರು.
ಇದೇ ಅವಧಿಯಲ್ಲಿ ಮೈಸೂರು ಮಿನರಲ್ಸ್ ಚೇರಮನ್ ಆಗಿ ಕೂಡ ಲಕ್ಷ್ಮೀ ಹೆಬ್ಬಾಳಕರ್ ಅವರು ಕೆಲಸ ನಿರ್ವಹಿಸಿದ್ದಾರೆ. 2019 ರಲ್ಲಿ 17 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆಯಾಯಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದರೂ ಕೂಡ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸುವಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಯಶಸ್ವಿಯಾಗಿದ್ದು ಅವರ ಕಾರ್ಯಕ್ಷಮತೆ ಮತ್ತು ಕ್ಷೇತ್ರದ ಮೇಲಿನ ಕಾಳಜಿಗೆ ಸಾಕ್ಷಿಯಾಗಿದೆ.
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ 1.8 ಲಕ್ಷ ಮತ ಪಡೆದು, ಬಿಜೆಪಿ ಅಭ್ಯರ್ಥಿಯನ್ನು 56 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಸಾಧನೆ, ಛಲ ಮತ್ತು ಪಕ್ಷ ನಿಷ್ಠೆಗೆ ಮತ್ತೊಂದು ಹೆಸರೇ ಲಕ್ಷ್ಮೀ ಹೆಬ್ಬಾಳಕರ್ ಎನ್ನುವ ರೀತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.