ಬೆಳಗಾವಿ:
ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಇದು ಸಿನಿಮಾದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಬರೆದ ಸಾಲು. ಆದರೆ ಇದೇ ಹಾಡು ಎಷ್ಟೋ ಪ್ರೇಮಿಗಳಿಗೆ ಧೈರ್ಯ ಹಾಗೂ ಸ್ಥೈರ್ಯ ತುಂಬುವ ಕೆಲಸ ಮಾಡಿದೆ. ಇದನ್ನ ಈಗ್ಯಾಕೆ ನೆನೆಪಿಸುತ್ತಿದ್ದಿವೀ ಅಂದರೆ ಗೋವಾ ಮೂಲದ ಹುಡುಗಿ ಜೊತೆಗೆ ಬೆಳಗಾವಿ ಹುಡುಗನ ಪ್ರೇಮ ಪ್ರಕರಣ ಈಗ ಬೆಳಗಾವಿ ಎಸ್ಪಿ ಕಚೇರಿ ತಲುಪಿದೆ.ಪ್ರೇಯಸಿಯನ್ನು ದೇಗುಲದಲ್ಲಿ ಮದುವೆ ಆಗಿ ಬೆಳಗಾವಿಗೆ ಕರೆ ತಂದ ಪ್ರಿಯಕರ ತಮಗೆ ರಕ್ಷಣೆ ಕೋರಿ ಎಸ್ಪಿ ಕಚೇರಿಯ ಮೆಟ್ಟಿಲೇರಿದ್ದಾನೆ. ನವ ಜೋಡಿಗೆ ಯುವತಿ ಪೋಷಕರ ಕಾಟ ಶುರುವಾಗಿದ್ದು ಪ್ರೇಮಿಗಳು ತಮ್ಮಷ್ಟಕ್ಕೆ ಬದುಕಲು ಬಿಡಲು ಅವಕಾಶ ಕಲ್ಪಿಸುವಂತೆ ಬೆಳಗಾವಿ ಎಸ್ಪಿ ಮೊರೆ ಹೋಗಿದ್ದಾರೆ.ಗೋವಾದ ಇಶಾ ಸೇಟ್ಕರ್ ಜೊತೆಗೆ ರೋಹನ್ ಪೂಜಾರಿ ಮದುವೆಯಾಗಿದ್ದಾನೆ. ರೋಹನ್ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸುಲದಾಳ ಗ್ರಾಮದ ನಿವಾಸಿಯಾಗಿದ್ದು ಗೋವಾದಲ್ಲಿ ಹಲವು ವರ್ಷಗಳಿಂದ ರೋಹನ್ ಆತನ
ಕುಟುಂಬದೊಂದಿಗೆ ವಾಸವಿದ್ದಾನೆ.ಪಣಜಿಯ ಸೇಂಟ್ ಮೈಕಲ್ ಕಾಲೇಜಿನಲ್ಲಿ ಓದುವಾಗ ರೋಹನ್-ಇಶಾ ಮಧ್ಯೆ ಪ್ರೀತಿ ಬೆಳೆದಿದ್ದು
ಗೋವಾದಲ್ಲಿ ಪ್ರೇಮಿಗಳಿಬ್ಬರಿಗೆ ರೆಜಿಸ್ಟರ್ ಮ್ಯಾರೇಜ್ ಆಗಲು ಯುವತಿ ಪೋಷಕರು ಬಿಟ್ಟಿಲ್ಲ.ಹೀಗಾಗಿ ಕಳೆದ ತಿಂಗಳು ಗೋವಾದ ದೇಗುಲದಲ್ಲಿ ಇಶಾ ಜೊತೆಗೆ ರೋಹನ್ ಮದುವೆಯಾಗಿದ್ದು ಇಬ್ಬರ ದಾಖಲೆ ಪತ್ರಗಳಲ್ಲಿ ಗೋವಾ ರಾಜ್ಯದ ವಿಳಾಸ ಇರುವ ಹಿನ್ನೆಲೆ ಬೆಳಗಾವಿಯಲ್ಲೂ ಮದುವೆಯನ್ನು ರೆಜಿಸ್ಟರ್ ಮಾಡಲು ಬರಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರಂತೆ.ಸದ್ಯ ತನ್ನ ಪ್ರೇಯಸಿ ಇಶಾಳನ್ನು ಬೆಳಗಾವಿಗೆ ರೋಹನ್ ಕರೆತಂದಿದ್ದು ಅತ್ತ ಗೋವಾ ಪೊಲೀಸರಿಗೆ ಇಶಾ ಕಿಡ್ನಾಪ್ ಆಗಿರುವ ಕುರಿತು ಇಶಾ ಕುಟುಂಬಸ್ಥರು ಗೋವಾ ಪೊಲೀಸರಿಗೆ ದೂರು ನೀಡಿದ್ದು ಗೋವಾ ಪೊಲೀಸರ ಸಮೇತ ಬೆಳಗಾವಿಗೆ ಬಂದು ಇಶಾಗಾಗಿ ಪೋಷಕರು ಹುಡುಕಾಟ ನಡೆಸಿದ್ದಾರೆ.ಹುಡುಗನ ಮನೆಗೆ ಹೋಗಿ ಇಶಾಳನ್ನು ಮರಳಿ ಕರೆದೊಯ್ಯಲು ಇಶಾ ಪೋಷಕರು ಪ್ರಯತ್ನ ನಡೆಸುತ್ತಿದ್ದಾರೆ.ಪದೇ ಪದೇ ಯುವತಿ ಪೋಷಕರ ಕಿರಿಕಿರಿಗೆ ಬೇಸತ್ತು ಬೆಳಗಾವಿ ಎಸ್ಪಿ ಕೆ.ರಾಮರಾಜನ್ ಅವರ ಬಳಿ ಪ್ರೇಮಿಗಳು ಬಂದಿದ್ದು
ತಾವಿಬ್ಬರು ಪರಸ್ಪರ ಐದು ವರ್ಷಗಳ ಕಾಲ ಪ್ರೀತಿಸಿದ್ದೇವೆ, ಜೀವನ ನಡೆಸಲು ಅವಕಾಶ ಮಾಡಿಕೊಡಿ ಎಂದು ಜೋಡಿ ಮನವಿ ಮಾಡಿದೆ.











