

ಬೆಳಗಾವಿ: ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಭರವಸೆಗಳ ಹೊರತಾಗಿಯೂ ಕಬ್ಬಿನ ದರದ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಹೊರಬೀಳದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿರುವ ರೈತರು, ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯಿಂದಲೇ ಸಭೆ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದರೂ, ಅಧಿಕಾರಿಗಳು ಸಭೆ ನಡೆಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ರೈತರು ಕಿಡಿಕಾರಿದರು.
ರೈತ ಮುಖಂಡ ಗಣೇಶ ಇಳಿಗೇರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರಕ್ಕೆ ಬೀಗ ಹಾಕಲು ಮುಂದಾದರು. ಈ ವೇಳೆ ಪೊಲೀಸರು ರೈತರನ್ನು ತಡೆಯಲು ಪ್ರಯತ್ನಿಸಿದ ಪರಿಣಾಮ ಪೊಲೀಸರು ಹಾಗೂ ರೈತರ ನಡುವೆ ತೀವ್ರ ವಾಗ್ವಾದ ನಡೆಯಿತು. ಸ್ಥಳದಲ್ಲಿ ನೂಕಾಟ, ತಳ್ಳಾಟವೂ ನಡೆದಿದ್ದು, ಈ ಗೊಂದಲದಲ್ಲಿ ಓರ್ವ ಮಹಿಳೆಗೆ ಗಾಯವಾಗಿದೆ.
ಕೊಟ್ಟ ಮಾತಿನಂತೆ ಸಭೆ ನಡೆಸಿ, ಕಬ್ಬಿನ ದರ ನಿಗದಿ ಮಾಡಿ:
ಈ ಹಿಂದೆ ನೀಡಿದ ಭರವಸೆಯಂತೆ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿ, ಕಬ್ಬಿನ ದರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು. ಸಭೆ ನಡೆಸುವ ಭರವಸೆ ನೀಡಿ ಬೆಳಿಗ್ಗೆಯಿಂದ ರೈತರನ್ನು ಕಾಯಿಸುತ್ತಿರುವುದು ಸರಿಯಲ್ಲ. ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಸಭೆ ನಡೆಸಿ ಚರ್ಚೆ ಮಾಡುವುದರಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರತಿ ಟನ್ ಕಬ್ಬಿಗೆ ಸೂಕ್ತ ದರ ನಿಗದಿಪಡಿಸಿ ಅಧಿಕೃತ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಚನ್ನಮ್ಮ ಸರ್ಕಲ್ ಬಂದ್ ಮಾಡುವ ಎಚ್ಚರಿಕೆ:
ಜಿಲ್ಲಾಡಳಿತ ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇನ್ನೂ ಕೆಲವೇ ಕ್ಷಣಗಳಲ್ಲಿ ಸ್ಪಂದನೆ ಸಿಗದಿದ್ದರೆ ಚನ್ನಮ್ಮ ಸರ್ಕಲ್ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಇದೇ ರೀತಿ ಅಧಿಕಾರಿಗಳು ಸಭೆಯ ಹೆಸರಿನಲ್ಲಿ ಕಾಲಹರಣ ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.











