ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಬ್ಬು ದರ ನಿಗದಿ ಗೊಂದಲಕ್ಕೆ ನಾಳೆಯೊಳಗೆ ತೆರೆ ಎಳೆಯುವ ಭರವಸೆ – ಸಚಿವ ಸತೀಶ್ ಜಾರಕಿಹೊಳಿ!

ರೈತರು ಮತ್ತು ಕಾರ್ಖಾನೆ ಮಾಲೀಕರ ಬೇಡಿಕೆಗಳ ನಡುವೆ ಹೊಂದಾಣಿಕೆಗೆ ಪ್ರಯತ್ನ | ಇಂದಿನ ಸಭೆ 50-50 ಆಗಿದೆ ಎಂದ ಸಚಿವರು

ಬೆಳಗಾವಿ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಕಬ್ಬಿನ ದರ ನಿಗದಿ ಗೊಂದಲಕ್ಕೆ ನಾಳೆಯೊಳಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರೈತರ ಮನವಿ ಮೇರೆಗೆ ಮತ್ತೊಮ್ಮೆ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿಯೂ ಸಭೆ ನಡೆದಿತ್ತು. ಇದೀಗ ಮತ್ತೊಮ್ಮೆ ಸಭೆ ನಡೆಸಿ ರೈತರ ಅಹವಾಲುಗಳನ್ನು ಆಲಿಸಲಾಗಿದೆ ಎಂದು ತಿಳಿಸಿದರು.

ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಬೇಡಿಕೆಗಳು ವಿಭಿನ್ನವಾಗಿವೆ. ರೈತರು ಒಂದು ದರಕ್ಕೆ ಒತ್ತಾಯಿಸುತ್ತಿದ್ದರೆ, ಕಾರ್ಖಾನೆ ಮಾಲೀಕರು ತಮ್ಮದೇ ಆದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಎರಡೂ ಕಡೆಯ ಬೇಡಿಕೆಗಳಲ್ಲಿ ಹೊಂದಾಣಿಕೆ ಸಾಧ್ಯವಾಗದ ಕಾರಣ ಕಬ್ಬಿನ ದರ ನಿಗದಿ ವಿಳಂಬವಾಗುತ್ತಿದೆ. ಹೀಗಾಗಿ ಎರಡೂ ಕಡೆಯವರನ್ನು ಒಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ನಡುವೆ ಪ್ರತ್ಯೇಕ ಸಭೆ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಅಗತ್ಯ ಬಿದ್ದರೆ ನಾಳೆ ಮತ್ತೊಮ್ಮೆ ಕಾರ್ಖಾನೆ ಮಾಲೀಕರ ಸಭೆ ನಡೆಸಲಾಗುವುದು. ಕಬ್ಬಿನ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಮುಖ್ಯಮಂತ್ರಿಗಳ ಜೊತೆಯೂ ಚರ್ಚೆ ನಡೆಸುತ್ತೇವೆ. ಬೇರೆ ಯಾವುದೇ ವಿಚಾರಗಳನ್ನು ಪ್ರಸ್ತಾಪಿಸದೆ ದರ ನಿಗದಿ ಸಮಸ್ಯೆ ಬಗೆಹರಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಇಂದಿನ ಸಭೆಯ ಫಲಿತಾಂಶವನ್ನು 50-50 ಎಂದು ಹೇಳಬಹುದು. ರೈತರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ಒಂದು ನಿರ್ದಿಷ್ಟ ದರದ ಅಂತರವಿದೆ. ಆ ಅಂತರವನ್ನು ಕಡಿಮೆ ಮಾಡಿ ಇಬ್ಬರಿಗೂ ಒಪ್ಪಿಗೆಯಾಗುವಂತಹ ದರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಅಂತಿಮವಾಗಿ ದರ ನಿಗದಿಯಾದ ಬಳಿಕ ರೈತರಿಗೆ ಅಧಿಕೃತವಾಗಿ ತಿಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಎಸ್‌ಎಪಿ ಮತ್ತು ಎಂಎಸ್‌ಪಿ ವಿಚಾರವಾಗಿ ಮಾತನಾಡಿದ ಅವರು, ಎಸ್‌ಎಪಿ ಹಾಗೂ ಎಂಎಸ್‌ಪಿ ದರವನ್ನು ರೈತರಿಗೆ ನೇರವಾಗಿ ನೀಡುವ ವಿಚಾರವೂ ಚರ್ಚೆಯಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ನೀಡಬೇಕಾದ ಕಬ್ಬಿನ ದರ ನಿಗದಿಪಡಿಸುವುದೇ ನಮ್ಮ ಆದ್ಯತೆಯಾಗಿದೆ. ಸಕ್ಕರೆ ದರ ಪ್ರತಿದಿನವೂ ಏರಿಳಿತವಾಗುತ್ತಿರುವುದರಿಂದ ಕಾರ್ಖಾನೆ ಮಾಲೀಕರಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕೆಂದು ಸರ್ಕಾರದ ವತಿಯಿಂದ ಒತ್ತಾಯ ಮಾಡಲಾಗಿದೆ ಎಂದರು.

ಸಕ್ಕರೆಗೆ ಎಂಎಸ್‌ಪಿ ನಿಗದಿಯಾದರೆ ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಒಂದು ರೀತಿಯ ಭದ್ರತೆ ಹಾಗೂ ಧೈರ್ಯ ಸಿಗಲಿದೆ. ಇದರಿಂದ ಕಬ್ಬಿನ ದರ ನಿಗದಿ ಪ್ರಕ್ರಿಯೆಯಲ್ಲಿಯೂ ಅನುಕೂಲವಾಗಬಹುದು. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಒಮ್ಮತ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ರೈತರು ಹಾಗೂ ಕಾರ್ಖಾನೆ ಮಾಲೀಕರು ಪರಸ್ಪರ ಹೊಂದಾಣಿಕೆಗೆ ಬಂದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ. ರೈತರು ಒಪ್ಪಿಗೆ ಸೂಚಿಸಿದರೆ ದರ ನಿಗದಿ ವಿಚಾರಕ್ಕೆ ಪರಿಹಾರ ಕಂಡುಕೊಳ್ಳಬಹುದು. ಒಂದು ವೇಳೆ ಒಪ್ಪಂದಕ್ಕೆ ಬರದಿದ್ದರೆ ಸಮಸ್ಯೆ ಮುಂದುವರಿಯುವ ಸಾಧ್ಯತೆಯಿದೆ. ಸಚಿವನಾಗಿ ಹಾಗೂ ಕಾರ್ಖಾನೆ ಮಾಲೀಕರ ಜವಾಬ್ದಾರಿಯ ದೃಷ್ಟಿಯಿಂದಲೂ ಈ ಸಮಸ್ಯೆ ಬಗೆಹರಿಸುವುದು ನನ್ನ ಕರ್ತವ್ಯವಾಗಿದೆ.

ಹೀಗಾಗಿ ನಾಳೆಯೊಳಗೆ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಒಮ್ಮತ ಮೂಡಿಸಿ ಕಬ್ಬಿನ ದರ ನಿಗದಿ ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

TV24 News Desk
the authorTV24 News Desk

Leave a Reply

error: Content is protected !!