




ಬೆಳಗಾವಿ: ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಎಂಎಸ್‌ಪಿ (MSP) ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಬಂದ್‌ನ ಪರಿಣಾಮ ಹೆಚ್ಚಾಗಿ ಕಂಡುಬಂದಿದ್ದು, ಹಲವು ಗ್ರಾಮಗಳಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ವಿಶೇಷವಾಗಿ ಗೋಕಾಕ ತಾಲೂಕಿನಾದ್ಯಂತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಂಧಿಕುರಬೇಟ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ರೈತರ ಬೇಡಿಕೆಗಳಿಗೆ ಸ್ಥಳೀಯರು ಸಾಥ್ ನೀಡಿದ್ದಾರೆ.
ಇನ್ನು ಮೂಡಲಗಿ ತಾಲೂಕಿನ ಅರಭಾವಿ ಹಾಗೂ ಅರಭಾವಿ ಮಠದ ಪರಿಸರದಲ್ಲಿಯೂ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ರೈತರ ಹೋರಾಟಕ್ಕೆ ಹಲವು ಮಠಾಧೀಶರು ಕೂಡ ಬೆಂಬಲ ಸೂಚಿಸಿದ್ದು, ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳಿಗೆ ಧ್ವನಿಗೂಡಿಸಿದ್ದಾರೆ.
ಇನ್ನೊಂದೆಡೆ ಸಂಕೇಶ್ವರ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ರೈತರು ಹೆದ್ದಾರಿಗೆ ಅಡ್ಡಲಾಗಿ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕಬ್ಬಿಗೆ ಪ್ರತಿ ಟನ್‌ಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು, ರೈತರ ಹಿತದೃಷ್ಟಿಯಿಂದ ಎಂಎಸ್‌ಪಿ ನಿಗದಿಪಡಿಸಬೇಕು ಎಂಬ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.
ಒಟ್ಟಿನಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯ ಹಳ್ಳಿಹಳ್ಳಿಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ವ್ಯಾಪಾರಸ್ಥರು, ಗ್ರಾಮಸ್ಥರು ಹಾಗೂ ಮಠಾಧೀಶರು ಕೂಡ ರೈತರ ಪರವಾಗಿ ನಿಂತಿರುವುದು ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ. ರೈತರ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.











