


ಬೆಳಗಾವಿ:
ಅಕ್ರಮ ಸಂಬಂಧದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಕುಡಗೋಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಸೋಮವಾರ ನಡೆದಿದೆ,ವ್ಯಕ್ತಿಯನ್ನು ಕುಡುಗೋಲಿನಿಂದ ಬರ್ಬರವಾಗಿ ಹತ್ಯೆ ಮಾಡಿ ಕೊಲೆ ಮಾಡಿದ್ದು ನಾವೇ ಎಂದು ಗಂಡ-ಹೆಂಡತಿ ತಾವೇ ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದ ರಮೇಶ್ ಎಂಬಾತನ ಜೊತೆಗೆ ಕಲ್ಲೋಳಿ ಗ್ರಾಮದ ಪ್ರಕರಣದ ಆರೋಪಿ ಬಣಪ್ಪನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಒಟ್ಟಿಗಿರುವ ಫೋಟೋವನ್ನು ರಮೇಶ ತನ್ನ ಮೊಬೈಲ್‌ನ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿದ್ದ ಎನ್ನಲಾಗಿದೆ. ಈ ಸ್ಟೇಟಸ್ ಗಮನಿಸಿದ ಬನಪ್ಪ ಒಡೆಯರ ಆಕ್ರೋಶಗೊಂಡು ರಮೇಶನನ್ನು ತನ್ನ ಮನೆಗೆ ಕರೆದು ಮನೆಯ ಹಿಂದಿನ ಗದ್ದೆಯಲ್ಲಿ ಬಣಪ್ಪ ಹಾಗೂ ಆತನ ಪತ್ನಿ ಕೊಲೆ ಮಾಡಿದ್ದಾರೆ..
ಆರೋಪಿಗಳಾದ ಬನಪ್ಪ ಮತ್ತು ಆತನ ಪತ್ನಿ ಲಕ್ಷ್ಮೀ ತಮ್ಮ ಮನೆಯ ಹಿಂದೆ ಇರುವ ಗದ್ದೆಯಲ್ಲಿ ಕೊಡಲಿಯಿಂದ ರಮೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.ರಮೇಶ್ ಜೊತೆಗಿನ ಅಕ್ರಮ ಸಂಬಂಧದ ವಿಚಾರಕ್ಕೆ ಈಗಾಗಲೇ ಒಮ್ಮೆ ಮನೆಯಲ್ಲಿ ಹಿರಿಯರು ಲಕ್ಷ್ಮೀ ಮಗೆ ಬುದ್ದಿ ಹೇಳಿದರು ಎನ್ನುವ ಮಾಹಿತಿಯೂ ದೊರೆತಿದೆ.
ಇನ್ನು ಕೊಲೆಯಾದ ವ್ಯಕ್ತಿಯನ್ನು ತಾಲೂಕಿನ ಗುಜನಟ್ಟಿ ಗ್ರಾಮದ ರಮೇಶ ಹಣಮಂತ ಬಂಡ್ರೋಳಿ(40) ಎಂದು ಗುರುತುಸಲಾಗಿದೆ. ಕಲ್ಲೋಳಿ ಗ್ರಾಮದ ಹೊರವಲಯದ ನಿವಾಸಿ ಲಕ್ಷ್ಮಿಬಣಪ್ಪ ಒಡೆಯರ(33) ಹಾಗೂ ಪತಿ ಬಣಪ್ಪ ರಾಮಚಂದ್ರ ಒಡೆಯರ(45) ಪೊಲೀಸರಿಗೆ ಶರಣಾಗಿದ್ದು, ಕಳೆದ ಒಂದು ವರ್ಷದಿಂದ ರಮೇಶ ಆರೋಪಿಗಳ ಭೂಮಿಯನ್ನೇ ಉಳುಮೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಕೊಲೆ ನಡೆದ ಬಳಿಕ ಆರೋಪಿಗಳು ಪರಾರಿಯಾಗದೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೆ ಬಳಸಲಾಗಿದೆ ಎನ್ನಲಾದ ಕೊಡಲಿ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಕೊಲೆ ಮಾಡಿ ಪೊಲೀಸ್ ಠಾಣೆಗೆ ತೆರಳಿದ ಆರೋಪಿಗಳು ಕೊಲೆಯನ್ನು ಪತಿ ನಾನು ಮಾಡಿದ್ದು ಎಂದರೇ ಪತ್ನಿ ಇಲ್ಲ ಈ ಕೊಲೆ ನಾನು ಮಾಡಿದ್ದು ಎಂದು ಪೊಲೀಸರ ಮುಂದೆಯೇ ವಾದ ಮಾಡಿದ್ದಾರೆ ಎನ್ನಲಾಗಿದೆ.ಸಧ್ಯ ಪೊಲೀಸರು ಪತಿ ಬಣಪ್ಪ ಹಾಗೂ ಪತ್ನಿ ಲಕ್ಷ್ಮೀ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು,ಅಕ್ರಮ ಸಂಬಂಧಕ್ಕೆ ತಂದೆ ತಾಯಿಗಳು ರಮೇಶನನ್ನು ಕೊಂದು ಜೈಲು ಸೇರಿದ್ದರೆ ಇತ್ತ ಅವರ ಮಕ್ಕಳು ಅನಾಥರಾಗಿದ್ದಾರೆ. ಅತ್ತ ಕೊಲೆಯಾದ ರಮೇಶನ ಕುಟುಂಬವೂ ಸಹ ಅನಾಥವಾಗಿದೆ.









