
ಬೆಳಗಾವಿ: ನಾಳೆ ಎಂ ಇ ಎಸ್ ಪುಂಡಾಟಿಕೆ ಖಂಡಿಸಿ ಕರ್ನಾಟಕ ಬಂದ್ ಮಾಡಲಾಗುತ್ತಿದೆ. ಇದರ ಬೆನ್ನಲ್ಲೆ ಇಂದು ಬೆಳಗಾವಿಯಲ್ಲಿ ಮರಾಠಿ ಚಿತ್ರ ಬಿಡುಗಡೆ ಮಾಡಲಾಗಿತ್ತು. ಫಾಲೋವರ್ ಎಂಬ ಮರಾಠಿ ಚಿತ್ರದಲ್ಲಿ ಗಡಿ ವಿವಾದದ ಕುರಿತು ತೋರಿಸಲಾಗಿದೆ ಎಂದು ಆರೋಪಿಸಿ ಮೊದಲ ಶೋವನ್ನು ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಬಂದ್ ಮಾಡಿಸಿದರು. ಬೆಳಗಾವಿಯ ಐನಾಕ್ಸ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಶೋವನ್ನು ಥಿಯೇಟರ್ ಮಾಲೀಕರು ಬಂದ್ ಮಾಡಿದರು. ಕರವೇ ಕಾರ್ಯಕರ್ತರು ಚಿತ್ರಮಂದಿರಕ್ಕೆ ಬರುತ್ತಿದ್ದಂತೆ ಸಿನಿಮಾದ ಬ್ಯಾನರ್ ತೆಗೆದಿಟ್ಟ ಸಿಬ್ಬಂದಿ 8 ರಿಂದ 10 ಕ್ಕೆ ಬುಕ್ ಆಗಿದ್ದ ಶೋ ಕ್ಯಾನ್ಸಲ್ ಮಾಡಿದರು. ಇಂದು ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಫಾಲೋವರ್ ಚಿತ್ರ ಬಿಡುಗಡೆಯಾಗಿತ್ತು. ಮೂವಿ ಟ್ರೈಲರ್ ನಲ್ಲಿ ಬೆಳಗಾವಿ ಯಳ್ಳೂರು ಮಹಾರಾಷ್ಟ್ರ ಬೋರ್ಡ್ ವಿವಾದ ಪ್ರಸ್ತಾಪಿಸಲಾಗಿದೆ ಎಂದು ಆರೋಪವಿತ್ತು ಎನ್ನಲಾಗಿದ್ದು ಈ ಆರೋಪವನ್ನು ಚಿತ್ರತಂಡ ತಳ್ಳಿಹಾಕಿದೆ. ಚಿತ್ರದಲ್ಲಿ ಯಾವುದೇ ಗಡಿ ವಿವಾದದ ಕುರಿತು ತೋರಿಸಿಲ್ಲ. ಕನ್ನಡದಲ್ಲಿಯೇ ಚಿತ್ರ ಪ್ರದರ್ಶನ ಮಾಡುತ್ತಿದ್ದೆವೆ.ಏಕಾಎಕಿ ಚಿತ್ರಪ್ರದರ್ಶನವನ್ನು ಬಂದ್ ಮಾಡಿಸಿದ್ದಾರೆ ಎಂದು ಚಿತ್ರತಂಡ ಅಳಲು ತೋಡಿಕೊಂಡ ಘಟನೆಯೂ ನಡೆಯಿತು. ಇನ್ನು ಚಿತ್ರ ಪ್ರದರ್ಶನ ಕ್ಯಾನ್ಸಲ್ ಆದ ಹಿನ್ನೆಲೆ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಚಿತ್ರಮಂದಿರದವರು ಹಣ ವಾಪಸ್ ನೀಡಿ ಕಳಿಸಿದರು. ಸ್ಥಳಕ್ಕೆ ಕ್ಯಾಂಪ್ ಎಸಿಪಿ, ಸಿಪಿಐ, ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.









