ಬೆಳಗಾವಿ ಬ್ರೇಕಿಂಗ್


ಬೆಳಗಾವಿ: ಕಬ್ಬು ಬೆಳೆಗಾರರಿಗೆ ಸೂಕ್ತ ದರ ನಿಗದಿಪಡಿಸುವ ಸಂಬಂಧ ಬೆಳಗಾವಿಯಲ್ಲಿ ನಡೆದ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಸಭೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಾರದೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತ ಮುಖಂಡ ಚೂನಪ್ಪ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸಭೆಯ ಬಳಿಕ ಮಾತನಾಡಿದ ಅವರು, ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆದ ಸಭೆ ಕೇವಲ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಪದೇ ಪದೇ ಅದೇ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಹೊರತು ರೈತರ ಸಮಸ್ಯೆಗೆ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನೀಡುವುದಾಗಿ ಕಾರ್ಖಾನೆ ಮಾಲೀಕರು ಹೇಳುತ್ತಿದ್ದಾರೆ. ಆದರೆ ಸಕ್ಕರೆಯ ದರದ ಏರಿಳಿತದ ಆಧಾರದ ಮೇಲೆ ಹೆಚ್ಚುವರಿ ಹಣ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ವಿಚಾರವನ್ನು ಪ್ರತಿಯೊಂದು ಸಭೆಯಲ್ಲೂ ಪುನರಾವರ್ತಿಸಲಾಗುತ್ತಿದೆ. ಆದರೆ ರೈತರಿಗೆ ಅಂತಿಮವಾಗಿ ಎಷ್ಟು ಹಣ ಸಿಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ನೀಡುತ್ತಿಲ್ಲ ಎಂದು ಚೂನಪ್ಪ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು.
ಇನ್ನು, ಕಬ್ಬು ಬೆಳೆಗಾರರ ಹೋರಾಟ ಇದೀಗ ಜನಾಂದೋಲನದ ಸ್ವರೂಪ ಪಡೆದುಕೊಂಡಿದೆ. ರೈತರು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇವಲ ಸಭೆಗಳನ್ನು ನಡೆಸುತ್ತಾ ಕಾಲಹರಣ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆ ಮಾಲೀಕರೊಂದಿಗೆ ಮತ್ತೊಮ್ಮೆ ಚರ್ಚಿಸಿ, ರೈತರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಒಂದು ಅಂತಿಮ ದರವನ್ನು ಘೋಷಣೆ ಮಾಡಬೇಕು. ಯಾವ ಹಂತದಲ್ಲಿ ಎಷ್ಟು ಹಣ ಪಾವತಿಸಲಾಗುತ್ತದೆ, ಯಾವ ಆಧಾರದ ಮೇಲೆ ಹಣ ನೀಡಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ರೈತರ ಮುಂದೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಕೇವಲ ಸಭಾಂಗಣಗಳಲ್ಲಿ ಕುಳಿತು ಚರ್ಚೆ ನಡೆಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ರೈತರು ಹೋರಾಟ ನಡೆಸುತ್ತಿರುವ ವೇದಿಕೆಗೆ ಬಂದು ಅವರ ಎದುರಲ್ಲೇ ಕಬ್ಬಿನ ದರವನ್ನು ಘೋಷಣೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಧ್ಯಪ್ರವೇಶಿಸಿ ಈ ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ನಾಳೆ ನಡೆಯಲಿರುವ ಜೈಲ್ ಭರೋ ಹೋರಾಟದ ವೇದಿಕೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ, ಕಬ್ಬಿನ ದರವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕು. ಕೇವಲ ಭರವಸೆ ಅಥವಾ ಚರ್ಚೆ ಬೇಡ, ರೈತರಿಗೆ ಸ್ಪಷ್ಟವಾದ ನಿರ್ಧಾರ ಬೇಕು. ಹಂತ ಹಂತವಾಗಿ ಹಣ ಪಾವತಿಸುವುದಾದರೆ ಅದರ ಸಂಪೂರ್ಣ ವಿವರವನ್ನು ವೇದಿಕೆಯಲ್ಲೇ ತಿಳಿಸಬೇಕು ಎಂದು ಚೂನಪ್ಪ ಪೂಜಾರಿ ಒತ್ತಾಯಿಸಿದರು.
ಒಟ್ಟಾರೆ, ಕಬ್ಬಿನ ದರ ನಿಗದಿ ವಿಚಾರದಲ್ಲಿ ನಡೆದ ಮತ್ತೊಂದು ಸುತ್ತಿನ ಸಭೆಯೂ ವಿಫಲವಾಗಿರುವುದು ರೈತರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದು, ನಾಳಿನ ಜೈಲ್ ಭರೋ ಹೋರಾಟದ ವೇದಿಕೆಯಲ್ಲಿ ಸರ್ಕಾರ ಯಾವ ನಿರ್ಧಾರ ಪ್ರಕಟಿಸಲಿದೆ ಎಂಬ ಕುತೂಹಲ ಮೂಡಿದೆ.









