

ಬೆಳಗಾವಿ ಬ್ರೇಕಿಂಗ್…
ಬೆಳಗಾವಿ: ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಡೆದ ಮತ್ತೊಂದು ಮಹತ್ವದ ಸಭೆಯೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೆ ವಿಫಲವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ರಹಸ್ಯ ಸ್ಥಳವೊಂದರಲ್ಲಿ ಕಬ್ಬು ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರ ನಡುವೆ ಮಹತ್ವದ ಸಭೆ ನಡೆಸಲಾಗಿದೆ. ಕಬ್ಬು ಬೆಳೆಗಾರರ ಬೇಡಿಕೆಗಳು ಮತ್ತು ಕಾರ್ಖಾನೆ ಮಾಲೀಕರ ನಿಲುವುಗಳ ಕುರಿತು ಸುದೀರ್ಘ ಚರ್ಚೆ ನಡೆದರೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಕಬ್ಬಿಗೆ ಸೂಕ್ತ ದರ ನಿಗದಿಪಡಿಸಬೇಕು ಹಾಗೂ ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕು ಎಂಬುದು ರೈತ ಮುಖಂಡರ ಪ್ರಮುಖ ಬೇಡಿಕೆಯಾಗಿದೆ. ಆದರೆ, ರೈತರ ಬೇಡಿಕೆಗಳಿಗೆ ಕಾರ್ಖಾನೆ ಮಾಲೀಕರು ಸಮ್ಮತಿಸದೆ ತಮ್ಮ ನಿಲುವಿಗೆ ಅಂಟಿಕೊಂಡಿರುವ ಹಿನ್ನೆಲೆಯಲ್ಲಿ ಮಾತುಕತೆ ಫಲಪ್ರದವಾಗಿಲ್ಲ ಎನ್ನಲಾಗಿದೆ.
ಈ ಹಿಂದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿಯೂ ಯಾವುದೇ ಅಂತಿಮ ತೀರ್ಮಾನ ಹೊರಬಂದಿರಲಿಲ್ಲ. ಇದೀಗ ಸಚಿವ ಸತೀಶ್ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಮತ್ತೊಮ್ಮೆ ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಯದಿರುವುದು ರೈತ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಒಂದೆಡೆ ಕಬ್ಬು ಬೆಳೆಗಾರರು ತಮ್ಮ ಬೇಡಿಕೆ ಈಡೇರಿಸುವಂತೆ ಹೋರಾಟವನ್ನು ತೀವ್ರಗೊಳಿಸುತ್ತಿದ್ದರೆ, ಮತ್ತೊಂದೆಡೆ ಕಾರ್ಖಾನೆ ಮಾಲೀಕರು ತಮ್ಮ ಪಟ್ಟು ಸಡಿಲಿಸದಿರುವುದು ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿದೆ.
ಕಬ್ಬಿನ ಬೆಲೆ ವಿಚಾರದಲ್ಲಿ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಸತತ ಸಭೆಗಳು ವಿಫಲವಾಗುತ್ತಿರುವುದರಿಂದ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯೂ ಎದುರಾಗಿದೆ.
ಸಭೆ ಮೇಲೆ ಸಭೆ ನಡೆದರೂ ಕಬ್ಬು ಬೆಳೆಗಾರರ ಸಮಸ್ಯೆಗೆ ಮಾತ್ರ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗ ಸರ್ಕಾರದ ಮುಂದಿನ ನಡೆ ಏನು ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.












