ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಮಾಂಜಾದಾರ ಬ್ಯಾನ್ ಮಾಡಿ ಯುವಕನ ಕುಟುಂಬಕ್ಕೆ ಪರಿಹಾರ ಕೊಡಿ!ಕುಟುಂಬಸ್ಥರ ಅಳಲು!

ಬೆಳಗಾವಿ: ಗಾಳಿಪಟದ ಮಾಂಜಾ ದಾರ ಮತ್ತೊಂದು ಜೀವವನ್ನು ಬಲಿ ಪಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮನೆಯ ಜವಾಬ್ದಾರಿ ಹೊತ್ತು, ಹಗಲು ಕಾಲೇಜಿಗೆ ತೆರಳಿ ರಾತ್ರಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವಕ ಮಾಂಜಾ ದಾರಕ್ಕೆ ಸಿಲುಕಿ ಮೃತಪಟ್ಟಿದ್ದು, ಬಡ ಕುಟುಂಬಕ್ಕೆ ಆಘಾತ ಉಂಟಾಗಿದೆ.
ಬೆಳಗಾವಿಯ ಗಾಂಧಿ ನಗರದ ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಸುಮಾರು 6 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ. ಮಹಾಂತೇಶ ನಗರದ ನಿವಾಸಿ ದ್ರುವ ಕರ್ಜಗಿ (19) ಮೃತ ಯುವಕ ಎಂದು ಗುರುತಿಸಲಾಗಿದೆ.
ದ್ರುವ ಪರೀಕ್ಷೆ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದ್ದ ಮಾಂಜಾ ದಾರಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.
ದ್ರುವ ಕುಟುಂಬದ ಆಧಾರವಾಗಿದ್ದ ಯುವಕನಾಗಿದ್ದ. ಹಗಲು ಕಾಲೇಜಿಗೆ ತೆರಳಿ, ರಾತ್ರಿ ಕೆಲಸಕ್ಕೆ ಹೋಗುತ್ತಿದ್ದ ದ್ರುವ, ಕುಟುಂಬದ ನಿರ್ವಹಣೆಗೆ ನೆರವಾಗುತ್ತಿದ್ದ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಮಗನನ್ನು ಕಳೆದುಕೊಂಡಿರುವ ಕುಟುಂಬ ಇದೀಗ ದಿಕ್ಕುತೋಚದ ಸ್ಥಿತಿಗೆ ತಲುಪಿದೆ.
ಯುವಕನ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಂಜಾ ದಾರದ ಬಳಕೆಯಿಂದ ಮತ್ತೊಂದು ಕುಟುಂಬ ಬೀದಿಗೆ ಬರುವಂತಾಗಿದೆ ಎಂದು ಕುಟುಂಬಸ್ಥರು ಹಾಗೂ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಂಜಾ ದಾರದಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು, ಇಂತಹ ಅಪಾಯಕಾರಿ ದಾರದ ಬಳಕೆ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಮಾಂಜಾ ದಾರದ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಮಾಂಜಾ ದಾರಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು? ಎಂಬ ಪ್ರಶ್ನೆ ಇದೀಗ ಬೆಳಗಾವಿ ಜನರಲ್ಲಿ ಮೂಡಿದೆ.

TV24 News Desk
the authorTV24 News Desk

Leave a Reply

error: Content is protected !!