ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಾಂಗ್ರೆಸ್ VS ಬಿಜೆಪಿ ನಡುವೆ ಎಸ್‌ಐಆರ್ ಲಡಾಯಿ — ಸಿಎಂ ಹೇಳಿಕೆಗೆ ಶಾಸಕ ಅಭಯ್ ಪಾಟೀಲ್ ತಿರುಗೇಟು!


ಬೆಳಗಾವಿ: ನಗರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಎಸ್‌ಐಆರ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ತೀವ್ರಗೊಂಡಿದೆ. ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಹುನ್ನಾರ ನಡೆಯುತ್ತಿದೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಅಭಯ್ ಪಾಟೀಲ್, “ನಾನು ಯಾವುದೇ ಮತದಾರರ ಹೆಸರನ್ನು ಡಿಲೀಟ್ ಮಾಡುವಂತೆ ಯಾವುದೇ ಪತ್ರ ನೀಡಿಲ್ಲ” ಎಂದು ಸ್ಪಷ್ಟಪಡಿಸಿದರು. ಬಿಎಲ್‌ಒಗಳು ನೀಡಿರುವ ವರದಿಯನ್ನು ಪರಿಶೀಲಿಸುವಂತೆ ಮಾತ್ರ ತಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಅವರು ಹೇಳಿದರು.
“ಯಾರು ಬೋಗಸ್ ಮತದಾರರಾಗಿದ್ದಾರೆ ಎಂಬುದನ್ನು ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದೇನೆ. ಆದರೆ ಇದನ್ನೇ ಮತದಾರರನ್ನು ಡಿಲೀಟ್ ಮಾಡುವ ಹುನ್ನಾರ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ” ಎಂದು ಅಭಯ್ ಪಾಟೀಲ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹಿಂದಿನ ಹೇಳಿಕೆಯ ಬೈಟ್‌ನ್ನು ಪ್ರದರ್ಶಿಸಿ, ಅದಕ್ಕೆ ಕೌಂಟರ್ ನೀಡಿದ ಶಾಸಕ ಅಭಯ್ ಪಾಟೀಲ್, ಬೋಗಸ್ ಮತದಾರರನ್ನು ರಕ್ಷಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
“ಸಿಎಂ ಡಿ.ಕೆ. ಶಿವಕುಮಾರ್ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಮಾಡಿದರೆ ಜನ ಶಹಬ್ಬಾಷ್ ಎನ್ನುವುದಿಲ್ಲ. ವಾಸ್ತವಾಂಶ ಏನು ಎಂಬುದನ್ನು ಜನರಿಗೆ ತಿಳಿಸಬೇಕು” ಎಂದು ಅಭಯ್ ಪಾಟೀಲ್ ಹೇಳಿದರು.
ಬಿಎಲ್‌ಒಗಳು ರಾಜ್ಯ ಸರ್ಕಾರದ ಅಧಿಕಾರಿಗಳಾಗಿದ್ದು, ಅವರಿಂದ ಬಂದಿರುವ ವರದಿಯನ್ನು ಪರಿಶೀಲಿಸುವಂತೆ ತಾವು ಪತ್ರ ಬರೆದಿರುವುದಾಗಿ ಅವರು ಪುನರುಚ್ಚರಿಸಿದರು. “ಬಿಎಲ್‌ಒಗಳ ವರದಿ ಪರಿಶೀಲಿಸಿ, ನಕಲಿ ಅಥವಾ ಬೋಗಸ್ ಮತದಾರರು ಇದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂಬುದೇ ನನ್ನ ಮನವಿ. ಯಾರ ಹೆಸರನ್ನೂ ನಿರ್ದಿಷ್ಟವಾಗಿ ಡಿಲೀಟ್ ಮಾಡುವಂತೆ ನಾನು ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಎಲ್‌ಎ, ಬಿಎಲ್‌ಒಗಳ ಕಾರ್ಯವ್ಯಾಪ್ತಿ ಹಾಗೂ ಚುನಾವಣಾ ಆಯೋಗದ ನಿಯಮಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಅಭಯ್ ಪಾಟೀಲ್ ಟೀಕಿಸಿದರು.
“ಇಂತಹವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿರುವ ಅಧಿಕಾರಿಗಳ ಕಾರ್ಯವ್ಯಾಪ್ತಿ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು” ಎಂದು ಅವರು ವಾಗ್ದಾಳಿ ನಡೆಸಿದರು.
ಇದೇ ವೇಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರು ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡು ಬಂದಿದ್ದಾರೆ ಎಂಬ ಆರೋಪವನ್ನೂ ಶಾಸಕ ಅಭಯ್ ಪಾಟೀಲ್ ಮಾಡಿದರು.
“ಇವರ ಅಧಿಕಾರಿಗಳು, ಇವರ ಬಿಎಲ್‌ಎಗಳು, ಇವರ ಬಿಎಲ್‌ಒಗಳು ಇದ್ದರೂ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ಇನ್ನು ರೋಹಿಂಗ್ಯಾಗಳು ಹಾಗೂ ಅಕ್ರಮ ಬಾಂಗ್ಲಾದೇಶಿಗರನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನೂ ಅಭಯ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾಡಿದರು.
ಒಟ್ಟಾರೆ, ಬೆಳಗಾವಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಎಸ್‌ಐಆರ್ ವಿಚಾರ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರೋಪಗಳಿಗೆ ಶಾಸಕ ಅಭಯ್ ಪಾಟೀಲ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮತದಾರರ ಪಟ್ಟಿ ಪರಿಶೀಲನೆ, ಬೋಗಸ್ ಮತದಾರರ ಪತ್ತೆ ಹಾಗೂ ಎಸ್‌ಐಆರ್ ಪ್ರಕ್ರಿಯೆ ಕುರಿತಂತೆ ಮುಂದಿನ ದಿನಗಳಲ್ಲಿ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ.

TV24 News Desk
the authorTV24 News Desk

Leave a Reply

error: Content is protected !!