ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಈ ಹೊಲಸು ಮಾಂಜಾ ದಾರಕ್ಕೆ ಇನ್ನೆಷ್ಟು  ಬಲಿ ಬೇಕು ಸ್ವಾಮಿ?


ಪರೀಕ್ಷೆ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ ಮಾಂಜಾ ದಾರ ಕುತ್ತಿಗೆಗೆ ಸಿಲುಕಿದ ಪರಿಣಾಮ ವಿದ್ಯಾರ್ಥಿಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ನಗರದ ಗಾಂಧಿ ನಗರ ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಬೆಳಗಾವಿಯ ಮಹಾಂತೇಶ್ ನಗರದ ನಿವಾಸಿ ಧ್ರುವ ಕರ್ಜಗಿ (19) ಎಂದು ಗುರುತಿಸಲಾಗಿದೆ. ಧ್ರುವ ಅವರು ಖಾಸಗಿ ಕಾಲೇಜಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಪರೀಕ್ಷೆ ಹಿನ್ನೆಲೆಯಲ್ಲಿ ಸಂಬಂಧಿಯ ಬೈಕ್ ಪಡೆದುಕೊಂಡು ಕಾಲೇಜಿಗೆ ತೆರಳಿದ್ದ ಧ್ರುವ, ಪರೀಕ್ಷೆ ಮುಗಿಸಿಕೊಂಡು ಅದೇ ಬೈಕ್‌ನಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಗಾಂಧಿ ನಗರ ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಅವರ ಕುತ್ತಿಗೆಗೆ ಸಿಲುಕಿದೆ ಎಂದು ತಿಳಿದುಬಂದಿದೆ.
ಮಾಂಜಾ ದಾರದಿಂದ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ. ಪರಿಣಾಮ ಧ್ರುವ ಅವರು ಬೈಕ್‌ನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಘಟನೆ ತಿಳಿಯುತ್ತಿದ್ದಂತೆ ಬೆಳಗಾವಿ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಮಾಂಜಾ ದಾರ ಎಲ್ಲಿಂದ ಬಂದಿತು ಮತ್ತು ಈ ಘಟನೆಗೆ ಕಾರಣವಾದ ಪರಿಸ್ಥಿತಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಪರೀಕ್ಷೆ ಮುಗಿಸಿ ಮನೆಗೆ ಸುರಕ್ಷಿತವಾಗಿ ವಾಪಸ್ ಆಗಬೇಕಿದ್ದ 19 ವರ್ಷದ ವಿದ್ಯಾರ್ಥಿ ಮಾಂಜಾ ದಾರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಈ ಸಂಬಂಧ ಬೆಳಗಾವಿ ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!