

ಬೆಳಗಾವಿ:
ರಾಜಕೀಯ ನಾಯಕರ ಭೇಟಿಗಳು ಉಭಯ ಕುಷಲೋಪರಿಗಳ ವಿಚಾರಣೆಗಳು ಹೊಸತೇನಲ್ಲ. ಆದರೆ ಕೆಲವು ಬಾರಿ ಕೆಲವು ಭೇಟಿಗಳು ಮಹತ್ವ ಪಡೆದುಕೊಳ್ಳುತ್ತವೆ. ಸದ್ಯ ಅಂತದೇ ಬೆಳವಣಿಗೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿಯ ಸಂಸದ ಜಗದೀಶ್ ಶೆಟ್ಟರ್ ಇಂದು ಬೆಳ್ಳಂ ಬೆಳಗ್ಗೆ ಗೋಕಾಕದ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದ್ದಾರೆ. ಯಾವ ಪಕ್ಷಕ್ಕೂ ಸೀಮತವಾಗದ ಎಲ್ಲ ಪಕ್ಷಗಳಿಗೂ ಕೇವಲ ಬಾಹ್ಯ ಬೆಂಬಲವನ್ನೇ ಸೂಚಿಸುತ್ತ ಬಂದಿರುವ ಲಖನ್ ಜಾರಕಿಹೊಳಿಯವರ ಮನೆಗೆ ಶೆಟ್ಟರ್ ದಿಢೀರ್ ಭೇಟಿ ನೀಡಿದ್ದಾರೆ. ಅಲ್ಲಿಗೆ ಗೋಕಾಕದ ಶಾಸಕ ರಮೇಶ್ ಜಾರಕಿಹೊಳಿ ಅಗಮಿಸಿ ಕೆಲ ಕಾಲ ಮೂವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತಿಚಿಗಷ್ಟೆ ಯಮಕನಮರಡಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಸಂಬಂಧಿಸಿದಂತೆ 21 ಕಡೆ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಪರಿಶೀಲನೆಯ ನಂತರ ಸತೀಶ್ ಮನೆಯಲ್ಲಿ ಸಿಕ್ಕಿದ್ದೇನೇನು ಎಂದು ಇಡಿ ಸವಿಸ್ತಾರವಾದ ಮಾಧ್ಯಮ ಪ್ರಕಟಣೆಯನ್ನೂ ಸಹ ಹೊರಡಿಸಿತ್ತು. ಇದಾದ ಎರಡೇ ದಿನಗಳಲ್ಲಿ ಬಿಜೆಪಿಯಲ್ಲಿರುವ ಶೆಟ್ಟರ್ ಜಾರಕಿಹೊಳಿ ಸಹೋದರರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಇಡಿ ದಾಳಿಯ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲದೇ ಬೇರೆ ಕಾರಣಗಳಿಂದ ಅಲ್ಲ ಎನ್ನುವುದು ಎಲ್ಲರಿಗೂ ಅರ್ಥವಾಗುವ ಸಂಗತಿ. ಜಾರಕಿಹೊಳಿ ಸಹೋದರರು ರಾಜಕೀಯವಾಗಿ ಬೇರೆ ಬೇರೆ ಪಕ್ಷದಲ್ಲಿದ್ದರೂ ಸಹ ಕುಟುಂಬದ ವಿಚಾರಗಳು ಬಂದಾಗ ಎಲ್ಲರೂ ಒಗ್ಗೂಡಿ ನಿಲ್ಲುತ್ತಾರೆ. ಅದನ್ನು ಹಲವು ಬಾರಿ ಸಹೋದರರೇ ಹೇಳಿಕೊಂಡಿದ್ದಾರೆ.ಇನ್ನು ಸಂಸದ ಶೆಟ್ಟರ್ ಗೆಲುವಿನಲ್ಲಿ ಜಾರಕಿಹೊಳಿ ಸಹೋದರರ ಸಿಂಹಪಾಲಿದೆ ಎನ್ನುವುದು ಬೆಳಗಾವಿಯ ಕಟ್ಟಕಡೆಯ ವ್ಯಕ್ತಿಗೂ ಸಹ ಗೊತ್ತಿರುವ ಸಂಗತಿ ಹೀಗಾಗಿ ಸದ್ಯ ಇಡಿ ಪರಿಶೀಲನೆಗೆ ಒಳಗಾಗಿ ಕುಗ್ಗಿರುವ ಜಾರಕಿಹೊಳಿ ಸಹೋದರರನ್ನು ಭೇಟಿ ಮಾಡಿ ಶೆಟ್ಟರ್ ಅವರು ಅವರನ್ನು ಸಂತೈಸುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಬಲವಿಲ್ಲದೇ ಶೆಟ್ಟರ್ ಆರಿಸಿ ಬರುವುದು ಸಹ ಕಷ್ಟವಾಗುತ್ತಿತ್ತು ಎನ್ನುವ ವಿಚಾರವೂ ಸಹ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಹೀಗಾಗಿ ಸಂಕಷ್ಟದಲ್ಲಿರುವ ಸಹೋದರರನ್ನು ಕಂಡು ಅವರನ್ನು ಸಂತೈಸುವ ಮೂಲಕ ಶೆಟ್ಟರ್ ಜಾರಕಹೊಳಿ ಸಹೋದರರ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.









