




ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಗುರ್ಲಾಪುರದಿಂದ ಬೆಳಗಾವಿಯ ಹಿಂಡಲಗಾ ಜೈಲಿನವರೆಗೆ ರೈತರು ಜೈಲ್ ಚಲೋ ಚಳವಳಿಗೆ ಕರೆ ನೀಡಿದ್ದು, ಇದರ ಬೆನ್ನಲ್ಲೇ ಕೆಲ ರೈತರು ಹಿಂಡಲಗಾ ಜೈಲಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.
ಗುರ್ಲಾಪುರದಿಂದ ರೈತರು ಜೈಲಿನತ್ತ ಹೊರಡುತ್ತಿದ್ದಂತೆಯೇ, ಬೆಳಗಾವಿಯ ಸ್ಥಳೀಯ ರೈತರ ಗುಂಪೊಂದು ನೇರವಾಗಿ ನಗರದ ಹೊರವಲಯದಲ್ಲಿರುವ ಹಿಂಡಲಗಾ ಜೈಲಿನ ಮುಂದೆ ಆಗಮಿಸಿದೆ. ಜೈಲಿನ ಮುಂಭಾಗದಲ್ಲಿ ಜಮಾಯಿಸಿದ ರೈತರು ರಸ್ತೆ ಮೇಲೆಯೇ ಕುಳಿತು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಗೆ ಬೇಡಿ ಹಾಕಿಕೊಂಡು ನಮ್ಮನ್ನು ಬಂಧಿಸಿ, ರೈತರ ಹೋರಾಟವನ್ನು ಹತ್ತಿಕ್ಕುವ ಬದಲು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಎಂದು ರೈತರು ಘೋಷಣೆ ಕೂಗಿದ್ದಾರೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನು ಪ್ರತಿಭಟನಾಕಾರರು ನೀಡಿದ್ದಾರೆ.
ಇನ್ನು ರೈತರ ಜೈಲ್ ಚಲೋ ಹೋರಾಟದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲು ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಜೈಲಿನ ಮುಂಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಒಂದೆಡೆ ಗುರ್ಲಾಪುರದಿಂದ ರೈತರು ಹಿಂಡಲಗಾ ಜೈಲಿನತ್ತ ಆಗಮಿಸುತ್ತಿದ್ದರೆ, ಮತ್ತೊಂದೆಡೆ ಸ್ಥಳೀಯ ರೈತರು ಈಗಾಗಲೇ ಜೈಲಿನ ಮುಂದೆ ಪ್ರತಿಭಟನೆ ಆರಂಭಿಸಿರುವುದು ಹೋರಾಟದ ತೀವ್ರತೆಯನ್ನು ಹೆಚ್ಚಿಸಿದೆ. ಕಬ್ಬಿನ ಬೆಲೆ ವಿಚಾರವಾಗಿ ರೈತರು ನಡೆಸುತ್ತಿರುವ ಹೋರಾಟ ಇದೀಗ ಜೈಲ್ ಚಲೋ ಚಳವಳಿಯ ರೂಪ ಪಡೆದುಕೊಂಡಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.










