ಕ್ರೈಂಜಿಲ್ಲೆಟ್ರೆಂಡ್ದೇಶಬೆಳಗಾವಿಬೆಳಗಾವಿ ನಗರರಾಜ್ಯ

ಚಿಕ್ಕಪ್ಪನ ಮನೆಯ ಬಂಗಾರ ಕದ್ದು ಥಾರ್ ತಂದ ಭೂಪ!ಥಾರ್ ಪೂಜೆಗೆ ಚಿಕ್ಕಪ್ಪನನ್ನೆ ಆಹ್ವಾನಿಸಿ ಪೊಲೀಸರ ಅತಿಥಿಯಾದ!

ಕೊಲ್ಹಾಪುರ:

ನೆರೆಯ ಕೊಲ್ಲಾಪುರ ಜಿಲ್ಲೆಯ ಪನ್ಹಾಳಾ ತಾಲೂಕಿನ ಸಾತವೇ ಗ್ರಾಮದಲ್ಲಿ 19 ವರ್ಷದ ಸಮರ್ ಚವಾಣ್ ಎಂಬ ಯುವಕನು ತನ್ನ ಚಿಕ್ಕಪ್ಪನ ಮನೆಯಲ್ಲಿ 15 ತೊಲಾ ಚಿನ್ನದಾಭರಣಗಳನ್ನು ಕಳವು ಮಾಡಿದ್ದಾನೆ. ಬಂದ ಹಣದಿಂದ ಹೊಸ ‘ಮಹೀಂದ್ರಾ ಥಾರ್’ ಕಾರನ್ನು ಖರೀದಿಸಿದ್ದಲ್ಲದೆ, ವಿಶೇಷವೆಂದರೆ ಕಾರಿನ ಪೂಜೆಗೆ ಸ್ವತಃ ಯಾವ ಮನೆಯಲ್ಲಿ ಕಳವು ಮಾಡಲಾಗಿದೆಯೋ ಅದೇ ಚಿಕ್ಕಪ್ಪನ ಕುಟುಂಬದವರನ್ನೇ ಆಹ್ವಾನಿಸಿದ್ದಾನೆ! ಈ ಮೂಲಕ ಕಳ್ಳತನದ ರಹಸ್ಯ ಬಯಲಾಗಿದೆ. ಸದ್ಯ ಕೊಡೋಲಿ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪನ್ಹಾಳಾ ತಾಲೂಕಿನ ಸಾತವೇ ಗ್ರಾಮದಲ್ಲಿ ಸಮರ್ ಪೊಪಟ್ ಚವಾಣ್ ಎಂಬಾತ ತನ್ನ ಕುಟುಂಬದೊಂದಿಗೆ ವಾಸವಿದ್ದನು. ಸಮರ್‌ನ ಹತ್ತಿರದ ಸಂಬಂಧಿಯಾದ ಚಿಕ್ಕಪ್ಪ ಉಮೇಶ್ ಮಾರುತಿ ಚವಾಣ್ ಎಂಬವರ ಮನೆ ಸಮೀಪದಲ್ಲೇ ಇದೆ. ಸುಮಾರು ಒಂದು ತಿಂಗಳ ಹಿಂದೆ ಸಮರ್ ಚವಾಣ್ ತನ್ನ ಚಿಕ್ಕಪ್ಪನ ಮನೆಯಿಂದ 15 ತೊಲಾ ಚಿನ್ನದಾಭರಣಗಳನ್ನು ಕಳವು ಮಾಡಿದ್ದನು.ಕದ್ದ ಆಭರಣಗಳನ್ನು ಗ್ರಾಮದ ಸಂಗ್ರಾಮ್ ಬಾಬಾಸೋ ಮೊರೆ ಎಂಬ ಜ್ಯುವೆಲ್ಲರ್ಸ್‌ಗೆ 10 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದನು. ಬಂದ ಆ 10 ಲಕ್ಷ ರೂಪಾಯಿಗಳಿಂದ ಆತ ಹೊಸ ‘ಮಹೀಂದ್ರಾ ಥಾರ್’ ಕಾರನ್ನು ಖರೀದಿಸಿದ್ದನು.ಹೊಸ ಕಾರು ಮನೆಗೆ ಬಂದ ನಂತರ, ಕಾರಿನ ಪೂಜೆಗೆ ತನ್ನ ಚಿಕ್ಕಪ್ಪ ಉಮೇಶ್ ಚವಾಣ್ ಮತ್ತು ಅವರ ಕುಟುಂಬದವರನ್ನು ಆಹ್ವಾನಿಸಿದ್ದನು. ಪೂಜೆಗೆ ಹೋಗುವ ಮುನ್ನ ಉಮೇಶ್ ಚವಾಣ್ ಮತ್ತು ಅವರ ಮನೆಯವರು ಧರಿಸಲು ಚಿನ್ನಾಭರಣಗಳನ್ನು ಹುಡುಕಾಡಿದಾಗ, ತಾವು ಆಭರಣಗಳನ್ನು ಇಟ್ಟಿದ್ದ ಜಾಗದಲ್ಲಿ ಚಿನ್ನ ಕಳುವಾಗಿರುವುದು ಗಮನಕ್ಕೆ ಬಂದಿದೆ.ಆದರೆ ಅಲ್ಲಿ ಒಂದು ಆಶ್ಚರ್ಯಕರ ಸಂಗತಿಯೆಂದರೆ, ಪಕ್ಕದಲ್ಲೇ ಇದ್ದ ಅಜ್ಜಿಯ ಚಿನ್ನಾಭರಣಗಳು ಕಳುವಾಗಿರಲಿಲ್ಲ! ಕೇವಲ ಉಮೇಶ್ ಚವಾಣ್ ಮತ್ತು ಅವರ ಪತ್ನಿಯ ಆಭರಣಗಳು ಮಾತ್ರ ಮಾಯವಾಗಿದ್ದವು. ಇದರಿಂದ ಕಳ್ಳನು ಮನೆಯವರೇ ಅಥವಾ ಅತ್ಯಂತ ಆಪ್ತರೊಬ್ಬರೇ ಆಗಿರಬೇಕು ಎಂಬ ಸಂಶಯ ಉಮೇಶ್ ಚವಾಣ್ ಅವರಿಗೆ ಮೂಡಿತು.
ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಅವರು ಕೊಡೋಲಿ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣ ಕಳುವಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು, ಉಮೇಶ್ ಚವಾಣ್ ಅವರ ಸೋದರಳಿಯ ಸಮರ್ ಚವಾಣ್ ಬಳಿಗೆ ಹೊಸ ಕಾರು ಹೇಗೆ ಬಂತು? ಅದಕ್ಕೆ ಹಣ ಎಲ್ಲಿಂದ ಸಿಕ್ಕಿತು? ಎಂಬ ಕೋನದಲ್ಲಿ ವಿಚಾರಣೆ ನಡೆಸಿದಾಗ, ಸಮರ್ ಚವಾಣ್ ತಾನೇ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ.
ಕೂಡಲೇ ಕಾರ್ಯಾಚರಣೆ ನಡೆಸಿದ ಕೊಡೋಲಿ ಪೊಲೀಸರು, ಕಳವು ಮಾಡಿದ್ದ ಸಮರ್ ಚವಾಣ್ ಹಾಗೂ ಕಳವು ಮಾಡಲಾದ ಚಿನ್ನಾಭರಣಗಳನ್ನು ಖರೀದಿಸಿದ್ದ ಬಂಗಾರದ ವ್ಯಾಪಾರಿ ಸಂಗ್ರಾಮ್ ಮೊರೆ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಬಳಿಯಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುವ ಹಾಗೂ ಮುಂದಿನ ತನಿಖೆ ನಡೆಸುವ ಕಾರ್ಯ ಮುಂದುವರಿದಿದೆ.
ಪೊಲೀಸ್ ತಂಡ:
ಕೊಡೋಲಿ ಪೊಲೀಸ್ ಠಾಣೆಯ ಮೇಲ್ವಿಚಾರಣೆಯಲ್ಲಿ, ಉಪ ಪೊಲೀಸ್ ಅಧೀಕ್ಷಕ ಶ್ರೀಕಾಂತ್ ಥಿಕಾಣೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಹವಾಲ್ದಾರರಾದ ಯುವರಾಜ್ ಪಾಟೀಲ್, ಬಾಬಾಸೋ ಕೀಟೆ, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಮಹೇಶ್ ಕದಮ್, ಅಮೊಲ್ ಚವಾಣ್ ಮತ್ತು ಮಹೇಶ್ ಶಿಂಧೆ ಈ ತನಿಖೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!