ಕ್ರೀಡೆಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕನ್ನಡ ರಾಜ್ಯೋತ್ಸವಕ್ಕೆ ಹೊಸ ಮೆರುಗು ತಂದ ಆರ್‌ಸಿಬಿ ಸೂಪರ್ ಫ್ಯಾನ್ ಸುಕುಮಾರ್!

ಬೆಳಗಾವಿ: ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಈ ಬಾರಿ ಆರ್‌ಸಿಬಿ (RCB) ತಂಡದ ಸೂಪರ್ ಅಭಿಮಾನಿಯ ಆಗಮನ ಮತ್ತಷ್ಟು ಮೆರುಗು ತಂದಿದೆ. ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿರುವ ಆರ್‌ಸಿಬಿ ಸೂಪರ್ ಫ್ಯಾನ್ ಸುಕುಮಾರ್, ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ಕಳೆದ 2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕಟ್ಟಾ ಅಭಿಮಾನಿಯಾಗಿರುವ ಸುಕುಮಾರ್, ತಂಡದ ಮೇಲಿನ ತಮ್ಮ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈ ಬಾರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಅವರನ್ನು ಆಹ್ವಾನಿಸಿರುವ ಸ್ಥಳೀಯ ಆರ್‌ಸಿಬಿ ಅಭಿಮಾನಿಗಳು, ತಮ್ಮ ನೆಚ್ಚಿನ ಅಭಿಮಾನಿಯೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿರುವ ಸುಕುಮಾರ್, ಇಲ್ಲಿನ ಕನ್ನಡ ರಾಜ್ಯೋತ್ಸವದ ಅದ್ಧೂರಿ ಆಚರಣೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಗೆ ಬಂದಿರುವುದು ಬಹಳ ಖುಷಿ ತಂದಿದೆ. ಕನ್ನಡ ನಾಡಿನ ಹಬ್ಬದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಅವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಇದೇ ವೇಳೆ ತಮ್ಮದೇ ಶೈಲಿಯಲ್ಲಿ “ಯಾರಪ್ಪಂದ್ ಏನೈತಿ, ಬೆಳಗಾವಿ ನಮ್ಮದೈತಿ” ಎಂದು ಡೈಲಾಗ್ ಹೊಡೆಯುವ ಮೂಲಕ ನೆರೆದಿದ್ದ ಅಭಿಮಾನಿಗಳಲ್ಲಿ ಉತ್ಸಾಹ ತುಂಬಿದ್ದಾರೆ. ಅವರ ಈ ಮಾತುಗಳಿಗೆ ಆರ್‌ಸಿಬಿ ಅಭಿಮಾನಿಗಳು ಹಾಗೂ ಕನ್ನಡಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ಬೈಕ್ ರ್ಯಾಲಿಗೂ ಆರ್‌ಸಿಬಿ ಸೂಪರ್ ಫ್ಯಾನ್ ಸುಕುಮಾರ್ ಚಾಲನೆ ನೀಡಲಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಒಗ್ಗಟ್ಟು, ಕನ್ನಡದ ಮೇಲಿನ ಅಭಿಮಾನ ಹಾಗೂ ರಾಜ್ಯೋತ್ಸವದ ಸಂಭ್ರಮ ಒಂದೇ ವೇದಿಕೆಯಲ್ಲಿ ಮೇಳೈಸುತ್ತಿರುವುದು ಈ ಬಾರಿಯ ಆಚರಣೆಯ ವಿಶೇಷವಾಗಿದೆ.

ಒಟ್ಟಿನಲ್ಲಿ, ಕನ್ನಡದ ಹಬ್ಬಕ್ಕೆ ಬೆಂಗಳೂರಿನಿಂದ ಆಗಮಿಸಿರುವ ಆರ್‌ಸಿಬಿ ಸೂಪರ್ ಫ್ಯಾನ್ ಸುಕುಮಾರ್ ಅವರ ಉಪಸ್ಥಿತಿ ಬೆಳಗಾವಿಯ ರಾಜ್ಯೋತ್ಸವದ ಸಂಭ್ರಮಕ್ಕೆ ಮತ್ತೊಂದು ಆಕರ್ಷಣೆಯಾಗಿದೆ.

TV24 News Desk
the authorTV24 News Desk

Leave a Reply

error: Content is protected !!