ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಎಂಇಎಸ್ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಬ್ರೇಕ್ – ಮಹಾರಾಷ್ಟ್ರದ 8 ಶಿವಸೇನೆ ಮುಖಂಡರಿಗೂ ಬೆಳಗಾವಿ ಪ್ರವೇಶ ನಿರ್ಬಂಧ!

ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಿಪಡಿಸಲು ಮುಂದಾಗಿದ್ದ ಎಂಇಎಸ್‌ಗೆ ಜಿಲ್ಲಾಡಳಿತದಿಂದ ಶಾಕ್ – ಅನುಮತಿ ನಿರಾಕರಣೆ, ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಬೆಳಗಾವಿ: ನಾಳೆ (ನವೆಂಬರ್ 1) ನಡೆಯಲಿರುವ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಯೋಜಿಸಲು ಉದ್ದೇಶಿಸಿದ್ದ ಕರಾಳ ದಿನಾಚರಣೆಗೆ ಅನುಮತಿ ನಿರಾಕರಿಸಿದೆ. ಇದರ ಜೊತೆಗೆ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಲಿದ್ದ ಮಹಾರಾಷ್ಟ್ರದ ಎಂಟು ಶಿವಸೇನೆ ಮುಖಂಡರಿಗೂ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವದ ದಿನದಂದು ಎಂಇಎಸ್ ಕರಾಳ ದಿನಾಚರಣೆ ನಡೆಸಲು ಸಿದ್ಧತೆ ಮಾಡಿಕೊಂಡಿತ್ತು. ಈ ಸಂಬಂಧ ಎಂಇಎಸ್ ಮುಖಂಡರು ಜಿಲ್ಲಾಡಳಿತಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅನುಮತಿ ನೀಡಲು ನಿರಾಕರಿಸಿವೆ.

ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಎಂಇಎಸ್‌ಗೆ ಜಿಲ್ಲಾಡಳಿತದ ನಿರ್ಧಾರ ಹಿನ್ನಡೆಯಾಗಿ ಪರಿಣಮಿಸಿದೆ. ಆದರೂ ಅನುಮತಿ ದೊರೆಯದಿದ್ದರೂ ಕರಾಳ ದಿನಾಚರಣೆ ನಡೆಸಲು ಎಂಇಎಸ್ ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಗರದ ಸಂಭಾಜಿ ಉದ್ಯಾನ ಮೈದಾನದಿಂದ ಮರಾಠ ಮಂದಿರದವರೆಗೆ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇನ್ನು ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ನಾಯಕರನ್ನು ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರದಿಂದ ಬೆಳಗಾವಿಗೆ ಆಗಮಿಸಲಿದ್ದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಖಂಡ ವಿಜಯ ದೇವಣೆ ಸೇರಿದಂತೆ ಒಟ್ಟು ಎಂಟು ಶಿವಸೇನೆ ಮುಖಂಡರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ನಾಳಿನ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. 2023ರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 163ರ ಅಡಿಯಲ್ಲಿ ಈ ನಿರ್ಬಂಧದ ಆದೇಶ ಜಾರಿಗೊಳಿಸಲಾಗಿದೆ.

ಒಂದೆಡೆ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತ್ತೊಂದೆಡೆ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಕರಾಳ ದಿನಾಚರಣೆ ನಡೆಸಲು ಮುಂದಾಗಿರುವುದು ಮತ್ತೆ ಭಾಷಾ ಸಂಘರ್ಷದ ವಾತಾವರಣಕ್ಕೆ ಕಾರಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದೆ.

ಅನುಮತಿ ಇಲ್ಲದಿದ್ದರೂ ಮೆರವಣಿಗೆ ನಡೆಸಲು ಎಂಇಎಸ್ ಮುಂದಾಗಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳು, ಸೂಕ್ಷ್ಮ ಪ್ರದೇಶಗಳು ಹಾಗೂ ಮೆರವಣಿಗೆ ನಡೆಯುವ ಸಾಧ್ಯತೆಯಿರುವ ಮಾರ್ಗಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸುವ ಸಿದ್ಧತೆಯೂ ನಡೆದಿದೆ.

ಒಟ್ಟಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ನಿರಾಕರಣೆ ಹಾಗೂ ಮಹಾರಾಷ್ಟ್ರದ ಎಂಟು ನಾಯಕರಿಗೆ ಪ್ರವೇಶ ನಿರ್ಬಂಧ ವಿಧಿಸಿರುವುದು ಈ ಬಾರಿಯ ರಾಜ್ಯೋತ್ಸವದ ಮುನ್ನಾದಿನದ ಪ್ರಮುಖ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ.

TV24 News Desk
the authorTV24 News Desk

Leave a Reply

error: Content is protected !!