
ಬೆಳಗಾವಿಯಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಸಚಿವರ ಸೇರ್ಪಡೆ ವಿಳಂಬವಾಗುತ್ತಿರುವ ವಿಚಾರ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರು ಮತ್ತೆ ಸಚಿವ ಸಂಪುಟ ಸೇರುತ್ತಾರಾ ಎಂಬ ಪ್ರಶ್ನೆಗೆ ಅವರು ಪರೋಕ್ಷವಾಗಿ ಉತ್ತರ ನೀಡುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.
ಮಹಿಳಾ ಸಚಿವರ ಸಂಪುಟ ಸೇರ್ಪಡೆ ಕುರಿತು ಪ್ರಶ್ನೆ ಕೇಳಿದಾಗ, “ನಾನು ಒಂದಕ್ಕೆ ಉತ್ತರ ಕೊಡ್ತೀನಿ, ಒಂದಕ್ಕೆ ಉತ್ತರ ಕೊಡೋದಿಲ್ಲ” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ಇದೇ ವೇಳೆ, “ಅತೀ ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಮಹಿಳಾ ಸಚಿವೆಯನ್ನು ನೋಡ್ತೀರಾ” ಎಂದು ಹೇಳುವ ಮೂಲಕ ಶೀಘ್ರದಲ್ಲೇ ಮಹಿಳೆಯೊಬ್ಬರು ಸಚಿವ ಸಂಪುಟ ಸೇರ್ಪಡೆಯಾಗಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.
ಆದರೆ, ಆ ಮಹಿಳಾ ಸಚಿವರು ತಾವೇನಾ ಎಂಬ ಪ್ರಶ್ನೆಗೆ ಲಕ್ಷ್ಮೀ ಹೆಬ್ಬಾಳಕರ ಯಾವುದೇ ನೇರ ಪ್ರತಿಕ್ರಿಯೆ ನೀಡಲಿಲ್ಲ. “ಎರಡನೇ ಪ್ರಶ್ನೆಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡೋದಿಲ್ಲ” ಎಂದು ಸ್ಪಷ್ಟಪಡಿಸಿದರು.
ಮುಂದುವರಿದು ಮಾತನಾಡಿದ ಅವರು, “ಅತ್ಯಂತ ಶೀಘ್ರದಲ್ಲೇ ಮಹಿಳಾ ಸಚಿವರು ಆಗ್ತಾರೆ. ಸುತ್ತಿ ಬಳಸಿ ನನ್ನ ಸುತ್ತಲೂ ಬರಬೇಡಿ. ನಾನು ಬಹಳಷ್ಟು ಸೂಕ್ಷ್ಮವಾದ ಸ್ಥಳದಲ್ಲಿ ಇದ್ದೇನೆ” ಎಂದು ಹೇಳುವ ಮೂಲಕ ಸಚಿವ ಸಂಪುಟ ಸೇರ್ಪಡೆ ವಿಚಾರದಲ್ಲಿ ನೇರವಾಗಿ ಮಾತನಾಡಲು ನಿರಾಕರಿಸಿದರು.
ಇದೇ ವೇಳೆ, ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಲಕ್ಷ್ಮೀ ಹೆಬ್ಬಾಳಕರ ನೆನಪಿಸಿದರು. “ರಾಜಕಾರಣದಲ್ಲಿ ಕಾಲ ಒಂದೇ ತರಹ ಇರುವುದಿಲ್ಲ, ಅಧಿಕಾರವು ಶಾಶ್ವತವಾಗಿ ಇರುವುದಿಲ್ಲ” ಎಂದು ಅವರು ಹೇಳಿದರು.
ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಜನರು ನೆನಪಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದ ಲಕ್ಷ್ಮೀ ಹೆಬ್ಬಾಳಕರ, “ಅಧಿಕಾರ ಇದ್ದಾಗ ಜನರು ನೆನಸುವಂತಹ ಕೆಲಸ ಮಾಡಿದ್ದೀನಿ. ಈಗ ನೀವೇ ಹೇಳ್ತಿದ್ದೀರಿ ಜನ ನೆನಪಿಸುತ್ತಿದ್ದಾರೆ ಅಂತ” ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ತಮ್ಮ ಕ್ಷೇತ್ರ ಮಾತ್ರವಲ್ಲದೆ, ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದ ಮಟ್ಟದಲ್ಲಿಯೂ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಒಟ್ಟಾರೆ, ಅತೀ ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಮಹಿಳಾ ಸಚಿವರನ್ನು ನೋಡ್ತೀರಾ ಎಂಬ ಲಕ್ಷ್ಮೀ ಹೆಬ್ಬಾಳಕರ ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಅವರು ಮತ್ತೆ ಸಚಿವ ಸಂಪುಟ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದಿದ್ದರೂ, ಅವರ ಹೇಳಿಕೆ ಮಾತ್ರ ಕುತೂಹಲ ಹೆಚ್ಚಿಸಿದೆ.











