ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ರೈತ ಹೋರಾಟ ಅಂತ್ಯ ಅಧಿಕೃತ ಘೋಷಣೆ ಮಾಡಿದ ಚೂನಪ್ಪ ಪೂಜಾರಿ!

ಬೆಳಗಾವಿ: ಕಳೆದ ಒಂದು ತಿಂಗಳಿನಿಂದ ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತ ಸಂಘಟನೆಗಳು ನಡೆಸುತ್ತಿದ್ದ ತೀವ್ರ ಹೋರಾಟಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ರೈತರ ಹೋರಾಟದ ಫಲವಾಗಿ ಪ್ರತಿ ಟನ್ ಕಬ್ಬಿಗೆ ಮೊದಲ ಕಂತಾಗಿ ₹3,600 ನೀಡುವ ಸಂಬಂಧ ಒಪ್ಪಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ತಮ್ಮ ಚಳುವಳಿಯನ್ನು ಹಿಂಪಡೆಯುತ್ತಿರುವುದಾಗಿ ರೈತ ಮುಖಂಡ ಚೂನಪ್ಪ ಪೂಜಾರಿ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ರೈತರ ಹೋರಾಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ರೈತರು, ಯುವಕರು ಹಾಗೂ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಎಲ್ಲರ ಸಹಕಾರದಿಂದಲೇ ಹೋರಾಟ ಯಶಸ್ವಿಯಾಗಲು ಸಾಧ್ಯವಾಗಿದೆ. ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ರೈತರಿಗೂ ಹಾಗೂ ಬೆಂಬಲ ನೀಡಿದ ಯುವಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕಳೆದ ವರ್ಷ ಗುರ್ಲಾಪುರದಲ್ಲಿ ರೈತರು ನಡೆಸಿದ ಹೋರಾಟದ ಮೂಲಕ ಪ್ರತಿ ಟನ್ ಕಬ್ಬಿಗೆ ₹3,250 ದರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೆವು. ಈ ಬಾರಿಯೂ ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಹೋರಾಟ ಆರಂಭಿಸಲಾಗಿತ್ತು. ಪ್ರತಿ ಟನ್ ಕಬ್ಬಿಗೆ ಮೊದಲ ಕಂತಿನಲ್ಲೇ ₹3,600 ನೀಡಬೇಕು ಎಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದೇವೆ. ಇದೀಗ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಇದು ಕೇವಲ ದರ ನಿಗದಿಯ ಒಪ್ಪಂದವಲ್ಲ, ಪ್ರಾಫಿಟ್ ಶೇರಿಂಗ್ ಆಧಾರಿತ ಒಪ್ಪಂದವಾಗಿದೆ. ರೈತರಿಗೆ ನ್ಯಾಯಯುತವಾಗಿ ಹಣ ಸಿಗಬೇಕು ಎಂಬ ಉದ್ದೇಶದಿಂದ ಈ ಒಪ್ಪಂದ ಮಾಡಲಾಗಿದೆ. ಹೀಗಾಗಿ ಸದ್ಯಕ್ಕೆ ನಮ್ಮ ಚಳುವಳಿಯನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ನಾಳೆಯಿಂದಲೇ ಸಕ್ಕರೆ ಕಾರ್ಖಾನೆಗಳು ತಮ್ಮ ಕಾರ್ಯಾರಂಭ ಮಾಡಬೇಕು ಎಂದು ಮನವಿ ಮಾಡಿದ ಚೂನಪ್ಪ ಪೂಜಾರಿ, ರೈತರು ಮತ್ತು ಕಾರ್ಖಾನೆಗಳ ನಡುವೆ ಉಂಟಾಗಿದ್ದ ಸಮಸ್ಯೆಗಳಿಗೆ ಮಾತುಕತೆ ಹಾಗೂ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ರೈತರ ಹಿತದೃಷ್ಟಿಯಿಂದ ಕಾರ್ಖಾನೆಗಳು ಕಾರ್ಯಾರಂಭ ಮಾಡುವುದು ಅಗತ್ಯವಾಗಿದೆ ಎಂದರು.

ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಭಾಗವಹಿಸಿದ್ದು, ರೈತ ಸಂಘಟನೆಗಳ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ನೀಡಿದ ಬೆಂಬಲವನ್ನು ಸ್ಮರಿಸಿದ ಅವರು, ಕಳೆದ ಒಂದು ತಿಂಗಳಿನಿಂದ ಹಗಲು-ರಾತ್ರಿ ಎನ್ನದೆ ಹೋರಾಟಕ್ಕೆ ಸಾಥ್ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಇನ್ನು ರೈತರ ಪ್ರಮುಖ ಬೇಡಿಕೆಗಳಾದ ಕನಿಷ್ಠ ಬೆಂಬಲ ಬೆಲೆ (MSP) ಹಾಗೂ ಎಥನಾಲ್ ಖರೀದಿ ದರ ನಿಗದಿ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಒಂದು ವೇಳೆ ನೀಡಿರುವ ಭರವಸೆ ಈಡೇರದಿದ್ದರೆ ರೈತರು ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತರ ಸಮಸ್ಯೆಗಳು ಕೇವಲ ಕಬ್ಬಿನ ಬೆಲೆಗೆ ಮಾತ್ರ ಸೀಮಿತವಾಗಿಲ್ಲ. ಕೃಷಿ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಿದೆ. ರೈತರು ಸದಾ ಜಾಗೃತರಾಗಿರಬೇಕು. ರೈತರ ಹಕ್ಕುಗಳು ಮತ್ತು ಬೇಡಿಕೆಗಳ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಚೂನಪ್ಪ ಪೂಜಾರಿ, ಕೃಷಿ ಸಂಕಷ್ಟದಲ್ಲಿರುವ ರೈತರಿಗೆ ಸಾಲದ ಹೊರೆ ದೊಡ್ಡ ಸಮಸ್ಯೆಯಾಗಿದೆ. ರೈತರ ಬದುಕು ಸುಧಾರಿಸಬೇಕಾದರೆ ಸಂಪೂರ್ಣ ಸಾಲಮನ್ನಾ ಮಾಡುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.

ಕೊನೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಮಾಧ್ಯಮ ಪ್ರತಿನಿಧಿಗಳು, ಪೊಲೀಸ್ ಇಲಾಖೆ ಹಾಗೂ ಯುವಕರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.

ಒಟ್ಟಿನಲ್ಲಿ, ಪ್ರತಿ ಟನ್ ಕಬ್ಬಿಗೆ ಮೊದಲ ಕಂತಾಗಿ ₹3,600 ನೀಡುವ ಒಪ್ಪಂದ ಜಾರಿಯಾದ ಹಿನ್ನೆಲೆಯಲ್ಲಿ ಚೂನಪ್ಪ ಪೂಜಾರಿ ನೇತೃತ್ವದ ರೈತ ಹೋರಾಟಕ್ಕೆ ಸದ್ಯಕ್ಕೆ ವಿರಾಮ ಸಿಕ್ಕಿದ್ದು, ಎಂಎಸ್‌ಪಿ ಮತ್ತು ಎಥನಾಲ್ ದರ ನಿಗದಿ ಸೇರಿದಂತೆ ಉಳಿದ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ.

TV24 News Desk
the authorTV24 News Desk

Leave a Reply

error: Content is protected !!