ಮೂಡಲಗಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ೧೦ ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ನೂತನ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಹೊಸ ತಾಲೂಕುಗಳ ಪೈಕಿ ಮೂಡಲಗಿ ತಾಲೂಕಿಗೆ ಮಾತ್ರ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಆರಂಭಿಸಲ್ಲಾಗಿದ್ದು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಒತ್ತಡವೇ ಕಾರಣವೆಂದು ತಿಳಿಸಿದರು.
ಬಾಲಚಂದ್ರ ಜಾರಕಿಹೊಳಿ ಅವರು ಅನೇಕ ವರ್ಷಗಳಿಂದ ಅರಭಾವಿ ಕ್ಷೇತ್ರದಲ್ಲಿ ಮಿಂಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ, ಪ್ರತಿ ಇಲಾಖೆಗಳ ಅನುದಾನವನ್ನು ತಂದು ಕ್ಷೇತ್ರವನ್ನು ಪ್ರಗತಿ ಪಥದತ್ತ ಮುನ್ನಡೆಸುತ್ತಿದ್ದಾರೆ, ಜೊತೆಗೆ ಕೆ.ಎಂ.ಎಫ್ ಅಧ್ಯಕ್ಷರಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿರುವ ಎಲ್ಲ ಸ್ಲಂ ಪ್ರದೇಶಗಳ ನಾಗರಿಕರಿಗೆ ಉಚಿತವಾಗಿ ಹಾಲನ್ನು ನೀಡಿದ್ದಾರೆ. ಬಾಲಚಂದ್ರ ಅವರು ಕೇವಲ ಈ ಭಾಗಕ್ಕೆ ಕೊಡುಗೈ ದಾನಿಗಳಲ್ಲ. ಬೆಂಗಳೂರು ನಗರಕ್ಕೂ ಸಹ ಕೊಡುಗೈ ದಾನಿಗಳಾಗಿ ಹೆಸರು ವಾಸಿಯಾಗಿದ್ದಾರೆ ಎಂದು ಶಾಸಕರ ಕಾರ್ಯವನ್ನು ಮುಕ್ತಕಂಠದಿAದ ಶ್ಲಾಘಿಸಿದ ಅವರು, ಬರುವ ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಭಾಗದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಮುನ್ನಡೆಯೊಂದಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.
ನಮ್ಮ ಬಿಜೆಪಿ ಸರಕಾರ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಬಾಕಿ ಉಳಿದಿರುವ ಐದು ತಿಂಗಳ ಅವಧಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಪರ ಕಾರ್ಯಗಳನ್ನು ಕೈಗೊಳ್ಳುತ್ತೇವೆ.
ಮತ್ತೇ ಬಿಜೆಪಿ ಅಧಿಕಾರಕ್ಕೆರಲಿದ್ದು, ಬಸವರಾಜ ಬೊಮ್ಮಾಯಿ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮಿಜಿ ವಹಿಸಿದ್ದರು.
ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ.ಶಶಿಧರ ಬಗಲಿ, ಜಿಲ್ಲಾನೋಂದಣಿ ಅಧಿಕಾರಿ ಶಿವಕುಮಾರ ಅಪರಂಜಿ, ತಹಶೀಲ್ದಾರ ಡಿ.ಜಿ.ಮಹಾತ್, ಉಪನೋಂದಣಿ ಅಧಿಕಾರಿ ಹರಿಯಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಚಿವ ಆರ್.ಅಶೋಕ್ ಅವರಿಗೆ ಕೃಷ್ಣನ ಕಂಚಿನ ಪ್ರತಿಮೆ ಹಾಗೂ ಇನ್ನೋರ್ವ ಸಚಿವ ಬೈರತಿ ಬಸವರಾಜ ಅವರಿಗೆ ಬೆಳ್ಳಿ ಗಣೇಶನ ಮೂರ್ತಿಯನ್ನು ನೀಡಿ ಸತ್ಕರಿಸಿದರು.ಹಾಗೂ ಅರಭಾವಿ ಕ್ಷೇತ್ರದ ಜನತೆ ಉಪಸ್ಥಿತರಿದ್ದರು.