

ಬೆಳಗಾವಿ: ಪ್ರಸಕ್ತ ಕಬ್ಬು ನುರಿಸುವ ಹಂಗಾಮು ಆರಂಭವಾಗಿ ಕೇವಲ ನಾಲ್ಕು ದಿನಗಳು ಕಳೆದಿರುವಾಗಲೇ ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಟರ್ಬೈನ್ ಸ್ಫೋಟಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಈ ಘಟನೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದ್ದು, ಇದೀಗ ಕಾರ್ಖಾನೆ ಆಡಳಿತ ಮಂಡಳಿಯ ಕಾರ್ಯವೈಖರಿ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಕಾರ್ಖಾನೆಯಲ್ಲಿ ಟರ್ಬೈನ್ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಈ ಘಟನೆ ಕಾರ್ಖಾನೆಯ ಸುರಕ್ಷತಾ ವ್ಯವಸ್ಥೆ ಹಾಗೂ ನಿರ್ವಹಣೆಯ ಬಗ್ಗೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಂಗಾಮು ಆರಂಭಕ್ಕೂ ಮುನ್ನ ಯಂತ್ರೋಪಕರಣಗಳ ಸಮರ್ಪಕ ಪರಿಶೀಲನೆ ನಡೆಸಲಾಗಿದೆಯೇ? ಹಳೆಯ ಹಾಗೂ ತುಕ್ಕು ಹಿಡಿದ ಟರ್ಬೈನ್‌ಗಳನ್ನು ಅಳವಡಿಸಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆಗಳನ್ನು ರೈತ ಮುಖಂಡರು ಎತ್ತಿದ್ದಾರೆ.
ಕಾರ್ಖಾನೆಯಲ್ಲಿ ಹಳೆಯ ಟರ್ಬೈನ್ ಅಳವಡಿಸಲಾಗಿದ್ದು, ತುಕ್ಕು ಹಿಡಿದಿರುವ ಯಂತ್ರೋಪಕರಣಗಳನ್ನೇ ಬಳಕೆ ಮಾಡಲಾಗುತ್ತಿದೆ ಎಂಬುದು ರೈತ ಮುಖಂಡರ ಪ್ರಮುಖ ಆರೋಪವಾಗಿದೆ. ಇಂತಹ ಸ್ಥಿತಿಯಲ್ಲಿರುವ ಟರ್ಬೈನ್‌ಗಳಿಂದ ಕಾರ್ಖಾನೆಯ ಸುರಕ್ಷತೆಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಿದ್ದರೂ ಆಡಳಿತ ಮಂಡಳಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲವೇ ಎಂಬ ಅನುಮಾನವನ್ನು ರೈತರು ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಟರ್ಬೈನ್ ಸ್ಫೋಟಗೊಂಡ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕಾರ್ಖಾನೆಯ ಕಾರ್ಮಿಕರೇ ಟರ್ಬೈನ್ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಇಂತಹ ಮಹತ್ವದ ತಾಂತ್ರಿಕ ದುರಸ್ತಿ ಕಾರ್ಯವನ್ನು ಸೂಕ್ತ ತಜ್ಞರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇಷ್ಟೇ ಅಲ್ಲದೆ, ಟರ್ಬೈನ್ ಸ್ಫೋಟದ ಹಿಂದೆ ಪೂರ್ವಯೋಜಿತ ಉದ್ದೇಶವಿದೆಯೇ ಎಂಬ ಅನುಮಾನವನ್ನೂ ರೈತ ಮುಖಂಡರು ವ್ಯಕ್ತಪಡಿಸಿದ್ದಾರೆ. ಈ ಘಟನೆ ಕೇವಲ ತಾಂತ್ರಿಕ ದೋಷದಿಂದ ಸಂಭವಿಸಿದೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂಬುದನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಹಂಗಾಮು ಆರಂಭದಲ್ಲೇ ಕಾರ್ಖಾನೆ ಬಂದ್ ಆರೋಪ!
ಟರ್ಬೈನ್ ಸ್ಫೋಟದ ಘಟನೆ ಒಂದೆಡೆಯಾದರೆ, ಹಂಗಾಮಿನ ಆರಂಭದಲ್ಲೇ ಕಾರ್ಖಾನೆ ಸಂಪೂರ್ಣವಾಗಿ ಬಂದ್ ಆಗಿರುವುದಕ್ಕೆ ರೈತರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿ ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಮಲಪ್ರಭಾ ಕಾರ್ಖಾನೆಯನ್ನು ಬಂದ್ ಮಾಡಿ, ರೈತರ ಕಬ್ಬನ್ನು ಬೇರೆ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ರೈತರು ಮಾಡಿದ್ದಾರೆ.
ಸ್ಥಳೀಯ ಕಬ್ಬು ಕಟಾವು ಗ್ಯಾಂಗ್‌ಗಳಿಗೆ ಅವಕಾಶ ನೀಡದೆ ಹೊರರಾಜ್ಯದ ಗ್ಯಾಂಗ್‌ಗಳಿಗೆ ಆದ್ಯತೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಸ್ಥಳೀಯ ಗ್ಯಾಂಗ್‌ಗಳಿಗೆ ಅನ್ಯಾಯ ಮಾಡಿ, ಹೊರರಾಜ್ಯದ ಗ್ಯಾಂಗ್‌ಗಳನ್ನು ಕರೆಸಿಕೊಳ್ಳಲಾಗಿದೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕಾಗಿ ಬರೋಬ್ಬರಿ 16 ಕೋಟಿ ರೂಪಾಯಿ ಗುತ್ತಿಗೆ ನೀಡಿ ಹೊರರಾಜ್ಯದ ಗ್ಯಾಂಗ್‌ಗಳನ್ನು ಕರೆತರಲಾಗಿದೆ ಎಂಬ ಆರೋಪವನ್ನು ರೈತರು ಮುಂದಿಟ್ಟಿದ್ದಾರೆ. ಸ್ಥಳೀಯ ಕಾರ್ಮಿಕರು ಹಾಗೂ ಗುತ್ತಿಗೆದಾರರಿಗೆ ಅವಕಾಶ ನೀಡದೆ ಹೊರರಾಜ್ಯದವರಿಗೆ ಮಣೆ ಹಾಕಿರುವುದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ವಿರುದ್ಧವೂ ಪ್ರಶ್ನೆಗಳ ಸುರಿಮಳೆ
ಟರ್ಬೈನ್ ಸ್ಫೋಟ, ಕಾರ್ಖಾನೆ ಬಂದ್, ಹಳೆಯ ಯಂತ್ರೋಪಕರಣಗಳ ಬಳಕೆ ಹಾಗೂ ಹೊರರಾಜ್ಯದ ಗ್ಯಾಂಗ್‌ಗಳಿಗೆ ಗುತ್ತಿಗೆ ನೀಡಿರುವ ಆರೋಪಗಳ ಕುರಿತು ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ.
ಆದರೆ, ಟರ್ಬೈನ್ ಸ್ಫೋಟದ ವಿಚಾರವಾಗಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ಕಾರ್ಖಾನೆ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ರಾಜಕೀಯಗೊಳಿಸಬೇಡಿ ಎಂದು ಅವರು ಗರಂ ಆಗಿದ್ದಾರೆ.











