ಜಿಲ್ಲೆಟ್ರೆಂಡ್ದೇಶಬಾಗಲಕೋಟೆಬಿದರಬೆಳಗಾವಿ ನಗರಮನೋರಂಜನೆರಾಜ್ಯರಾಯಿಚೂರು

ಕಬ್ಬು ಬೆಳೆಗಾರರ ಹೋರಾಟಕ್ಕೆ ಮತ್ತೊಂದು ತಿರುವು: ನಾಳೆ ಕರ್ನಾಟಕ ಬಂದ್‌ಗೆ ರೈತ ಸಂಘ ಕರೆ!

ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನಾಳೆ (ಅಕ್ಟೋಬರ್ 31) ರಾಜ್ಯಾದ್ಯಂತ ಕರ್ನಾಟಕ ಬಂದ್‌ಗೆ ರೈತ ಸಂಘಟನೆ ಕರೆ ನೀಡಿದೆ. ಈ ಕುರಿತು ರೈತ ಮುಖಂಡ ಶಶಿಕಾಂತ ಗುರುಜೀ ಅವರು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ರೈತ ಸಂಘಟನೆಗಳು ಕರೆ ನೀಡಿದ್ದವು. ಆದರೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಟೋಲ್ ಪ್ಲಾಜಾಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸದಂತೆ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದು ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಮಾತನಾಡಿದ ಶಶಿಕಾಂತ ಗುರುಜೀ, ರಾಜ್ಯದ ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿಗಳ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಳೆ ಬಂದ್ ನಡೆಸುವಂತೆ ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ. ಇದು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದ ಹೋರಾಟವಲ್ಲ. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ರೈತರ ನ್ಯಾಯಯುತ ಬೇಡಿಕೆಗಳಿಗೆ ಬೆಂಬಲ ಸೂಚಿಸಿ ಸಾರ್ವಜನಿಕರು ಬಂದ್‌ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇನ್ನು ಮುಂದಿನ ಹೋರಾಟದ ರೂಪುರೇಷೆ ಬಗ್ಗೆಯೂ ಘೋಷಣೆ ಮಾಡಿದ ಅವರು, ನಾಡಿದ್ದು ಹಿಂಡಲಗಾ ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಹಿಂದೆ ಹತ್ತರಗಿ ಟೋಲ್ ಪ್ಲಾಜಾಕ್ಕೆ ತೆರಳಿ ಪ್ರತಿಭಟನೆ ನಡೆಸುವ ನಿರ್ಧಾರ ಮಾಡಲಾಗಿತ್ತು. ಆದರೆ, ಇದೀಗ ಹತ್ತರಗಿಗೆ ತೆರಳುವ ಬದಲಾಗಿ ಹಿಂಡಲಗಾ ಜೈಲ್ ಭರೋ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ, ಕಬ್ಬು ಬೆಳೆಗಾರರ ಬೇಡಿಕೆಗಳ ವಿಚಾರವಾಗಿ ರೈತ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದು, ನಾಳಿನ ಕರ್ನಾಟಕ ಬಂದ್ ಹಾಗೂ ನಾಡಿದ್ದು ನಡೆಯಲಿರುವ ಹಿಂಡಲಗಾ ಜೈಲ್ ಭರೋ ಕಾರ್ಯಕ್ರಮದ ಘೋಷಣೆಯಿಂದ ರಾಜ್ಯದ ರೈತ ಚಳವಳಿಯಲ್ಲಿ ಹೊಸ ಬೆಳವಣಿಗೆ ಕಂಡುಬಂದಿದೆ.

TV24 News Desk
the authorTV24 News Desk

Leave a Reply

error: Content is protected !!